ಇರಾನಿಯನ್ನರ ವಾಪಸಾತಿಗೆ ವಿಶೇಷ ವಿಮಾನ ಕಳುಹಿಸಿ: ಟೆಹರಾನ್‌ಗೆ ಅಮೆರಿಕ ಒತ್ತಾಯ

Update: 2020-05-12 17:15 GMT

ವಾಶಿಂಗ್ಟನ್, ಮೇ 12: ಅಮೆರಿಕದಲ್ಲಿರುವ 11 ಇರಾನಿಯರನ್ನು ಕರೆದುಕೊಂಡು ಹೋಗಲು ವಿಶೇಷ ವಿಮಾನವೊಂದನ್ನು ಕಳುಹಿಸಿಕೊಡುವಂತೆ ಅಮೆರಿಕವು ಇರಾನನ್ನು ಸೋಮವಾರ ಒತ್ತಾಯಿಸಿದೆ. ಈ ಇರಾನಿಯರನ್ನು ಅಮೆರಿಕ ಗಡಿಪಾರು ಮಾಡಲು ಬಯಸಿದೆ. ಆದರೆ ಅವರ ಗಡಿಪಾರು ಪ್ರಕ್ರಿಯೆಯನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

“ನಿಮ್ಮ 11 ನಾಗರಿಕರು ನಮ್ಮಲ್ಲಿದ್ದಾರೆ. ಅವರು ಕಾನೂನುಬಾಹಿರ ವಿದೇಶಿಯರಾಗಿದ್ದು ನಿಮ್ಮ ದೇಶಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ ಎಂದು ನೀವು ಹೇಳುತ್ತೀರಿ. ಹಾಗಾದರೆ ನೀವೊಂದು ವಿಶೇಷ ವಿಮಾನವನ್ನು ಇಲ್ಲಿಗೆ ಕಳುಹಿಸಿ. ನಾವು ಎಲ್ಲಾ 11 ಮಂದಿಯನ್ನು ಒಮ್ಮೆ ನಿಮ್ಮಲ್ಲಿಗೆ ಕಳುಹಿಸಿಬಿಡುತ್ತೇವೆ” ಎಂದು ಅಮೆರಿಕದ ಆಂತರಿಕ ಭದ್ರತೆ ಇಲಾಖೆಯ ಉಸ್ತುವಾರಿ ಉಪ ಕಾರ್ಯದರ್ಶಿ ಕೆನ್ ಕಕ್ಸಿನೆಲಿ ಟ್ವೀಟ್ ಮಾಡಿದ್ದಾರೆ.

ವ್ಯಾಪಾರ ರಹಸ್ಯಗಳನ್ನು ಕದ್ದ ಆರೋಪ ಎದುರಿಸುತ್ತಿದ್ದ ಇರಾನ್‌ನ ವಿಜ್ಞಾನ ಪ್ರೊಫೆಸರ್ ಸೈರಸ್ ಅಸ್ಗರಿ ಕಳೆದ ವರ್ಷದ ನವೆಂಬರ್‌ನಲ್ಲಿ ಖುಲಾಸೆಗೊಂಡಿದ್ದರು. ಆದರೆ ಅವರು ಈಗಲೂ ಅಮೆರಿಕದ ಕಸ್ಟಡಿಯಲ್ಲೇ ಇದ್ದಾರೆ. ಅವರನ್ನು ವಾಪಸ್ ಕಳುಹಿಸಲು ಅಮೆರಿಕವು ತಿಂಗಳುಗಳಿಂದ ಪ್ರಯತ್ನಿಸುತ್ತಿದೆ. ಆದರೆ, ಈ ಪ್ರಕ್ರಿಯೆಯನ್ನು ಇರಾನ್ ವಿಳಂಬಿಸುತ್ತಿದೆ ಎಂದು ಅಮೆರಿಕ ಆರೋಪಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News