×
Ad

ಚೀನಿ ವರದಿಗಾರ್ತಿಯೊಂದಿಗೆ ಮಾತಿನ ಚಕಮಕಿ; ಪತ್ರಿಕಾಗೋಷ್ಠಿ ರದ್ದುಪಡಿಸಿದ ಟ್ರಂಪ್

Update: 2020-05-12 23:00 IST

ವಾಶಿಂಗ್ಟನ್, ಮೇ 12: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ, ಓರ್ವ ಚೀನಿ-ಅಮೆರಿಕನ್ ವರದಿಗಾರ್ತಿಯೊಂದಿಗೆ ಮಾತಿಕ ಚಕಮಕಿ ನಡೆಸಿದ ಬಳಿಕ ತನ್ನ ಕೊರೋನ ವೈರಸ್ ಸಂಬಂಧಿ ಪತ್ರಿಕಾಗೋಷ್ಠಿಯನ್ನು ಹಠಾತ್ತನೆ ಕೊನೆಗೊಳಿಸಿದ್ದಾರೆ.

“ಕೊರೋನ ವೈರಸ್ ಪತ್ತೆಗೆ ಪರೀಕ್ಷೆ ನಡೆಸುವ ವಿಷಯ ಬಂದಾಗ, ಇತರ ದೇಶಗಳಿಗಿಂತ ಅಮೆರಿಕ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ನೀವು ಪದೇ ಪದೇ ಯಾಕೆ ಹೇಳುತ್ತೀರಿ” ಎಂದು ಸಿಬಿಎಸ್ ನ್ಯೂಸ್‌ನ ವರದಿಗಾರ್ತಿ ವೀಜಿಯ ಜಿಯಾಂಗ್ ಕೇಳಿದರು. “ಇದರ ಅವಶ್ಯಕತೆ ಏನು? ಅಮೆರಿಕನ್ನರು ಈಗಲೂ ಪ್ರತಿ ದಿನ ಭಾರೀ ಸಂಖ್ಯೆಯಲ್ಲಿ ಪ್ರಾಣಗಳನ್ನು ಕಳೆದುಕೊಳ್ಳುತ್ತಿರುವಾಗ ಈ ಜಾಗತಿಕ ಸ್ಪರ್ಧೆ ಯಾಕೆ?” ಎಂದು ಅವರು ಪ್ರಶ್ನಿಸಿದರು.

ಜಗತ್ತಿನೆಲ್ಲೆಡೆ ಜನರು ಸಾಯುತ್ತಿದ್ದಾರೆ ಎಂದು ಟ್ರಂಪ್ ಉತ್ತರಿಸಿದರು. “ಬಹುಷಃ ನೀವು ಈ ಪ್ರಶ್ನೆಯನ್ನು ಚೀನಾಕ್ಕೆ ಕೇಳಬೇಕು. ನನ್ನನ್ನು ಕೇಳಬೇಡಿ. ಚೀನಾವನ್ನು ಕೇಳಿ, ಸರೀನಾ?” ಎಂದರು.

ಜಿಯಾಂಗ್ ಟ್ವಿಟರ್‌ನಲ್ಲಿ ತನ್ನನ್ನು ಚೀನಾ ಸಂಜಾತ ವೆರಸ್ಟ್ ವರ್ಜೀನಿಯನ್ ಎಂಬುದಾಗಿ ಗುರುತಿಸಿಕೊಳ್ಳುತ್ತಾರೆ.

“ಸರ್, ನೀವು ಇದನ್ನು ನನಗೇ ಯಾಕೆ ನಿರ್ದಿಷ್ಟವಾಗಿ ಹೇಳುತ್ತಿದ್ದೀರಿ?” ಎಂದು ಜಿಯಾಂಗ್ ಕೇಳಿದರು. ತನ್ನ ಚೀನೀ ಹುಟ್ಟಿನ ಹಿನ್ನೆಲೆಯಲ್ಲಿ ಟ್ರಂಪ್ ತನಗೆ ಈ ರೀತಿ ಹೇಳುತ್ತಿರಬಹುದು ಎನ್ನುವುದು ಅವರ ಭಾವನೆಯಾಗಿತ್ತು.

“ಇಂಥ ಕೊಳಕು ಪ್ರಶ್ನೆಯನ್ನು ಕೇಳುವ ಯಾರಿಗಾದರೂ ನಾನು ಹೀಗೆಯೇ ಹೇಳುತ್ತೇನೆ” ಎಂದು ಟ್ರಂಪ್ ಹೇಳಿದರು.

ತನ್ನ ಪ್ರಶ್ನೆಗೆ ಉತ್ತರ ಪಡೆಯಲು ಜಿಯಾಂಗ್ ಪ್ರಯತ್ನಿಸುತ್ತಿರುವಂತೆಯೇ, ಟ್ರಂಪ್ ಇನ್ನೋರ್ವ ವರದಿಗಾರನ ಬಳಿಗೆ ಹೋಗಲು ಯತ್ನಿಸಿದರು. ಆದರೆ ಇದಕ್ಕಿದ್ದಂತೆ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಿದ ಟ್ರಂಪ್ ಶ್ವೇತಭವನದತ್ತ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News