×
Ad

ಅಸಂಘಟಿತ ವಲಯದ ಶ್ರಮಿಕ ವರ್ಗಕ್ಕೆ ಪರಿಹಾರ ಘೋಷಿಸಿ: ಹರೀಶ್ ಕುಮಾರ್

Update: 2020-05-12 23:02 IST

ಮಂಗಳೂರು, ಮೇ 12: ಕೊರೋನದಿಂದ ಸಂಕಷ್ಟಕ್ಕೆ ಒಳಗಾಗಿರುವ ಅಸಂಘಟಿತ ವಲಯದ ಶ್ರಮಿಕ ವರ್ಗಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಇನ್ನೂ ಸರಿಯಾದ ಪರಿಹಾರ ಘೋಷಿಸಿಲ್ಲ. ತಕ್ಷಣ ಈ ವರ್ಗಗಳಿಗೆ ಪರಿಹಾರ ಘೋಷಣೆ ಮಾಡಬೇಕು ಎಂದು ದ.ಕ. ಜಿಲ್ಲಾಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು ಇತ್ತೀಚೆಗೆ ಮುಖ್ಯಮಂತ್ರಿ ಅನೇಕ ಪರಿಹಾರ ಘೋಷಣೆ ಮಾಡಿದ್ದರೂ ಅದರಲ್ಲಿ ಕೆಲವು ವರ್ಗಗಳ ಶ್ರಮಿಕರನ್ನು ಕೈಬಿಟ್ಟಿದ್ದಾರೆ. ಇನ್ನೊಂದು ಕಂತಿನ ಘೋಷಣೆ ಮಾಡುವುದಾಗಿ ಹೇಳಿದ್ದರೂ ಈವರೆಗೂ ಮಾಡಿಲ್ಲ. ಇದರಿಂದ ಕಾರ್ಮಿಕ ವರ್ಗ ಬದುಕಲು ಹೆಣಗಾಡುತ್ತಿದೆ. ಬೀಡಿ ಕಾರ್ಮಿಕರು, ಕ್ಷೌರಿಕರು, ಗೂಡಂಗಡಿ, ಬೀದಿ ಬದಿ ವ್ಯಾಪಾರಸ್ಥರು, ಟೈಲರ್‌ಗಳು, ಖಾಸಗಿ ಬಸ್ ಸಿಬ್ಬಂದಿಗೆ ಪ್ರತ್ಯೇಕ ಪ್ಯಾಕೇಜ್ ರೂಪಿಸಬೇಕು ಎಂದರು.

ಕೇವಲ ಕಾರ್ಮಿಕ ಬ್ಯಾಜ್ ಮತ್ತಿತರ ವ್ಯವಸ್ಥೆೆ ಇದ್ದವರಿಗೆ ಮಾತ್ರ ರಾಜ್ಯ ಸರಕಾರ ಪರಿಹಾರ ಘೋಷಿಸಿದೆ. ಇದು ಕೊರೋನ ಸಂಕಷ್ಟದ ವಿಶೇಷ ಸಂದರ್ಭವಾದ್ದರಿಂದ ನಿಯಮ ಬದಲಾವಣೆ ಮಾಡಿ ಎಲ್ಲ ಶ್ರಮಿಕ ವರ್ಗಗಳನ್ನೂ ಸೇರಿಸಿಕೊಳ್ಳಬೇಕು ಎಂದು ಹರೀಶ್ ಕುಮಾರ್ ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆಯೇ ವಿನಃ ಪರಿಹಾರ ನೀಡುವ ಬಗ್ಗೆ ಮಾತನಾಡುತ್ತಿಲ್ಲ. ರಾಜ್ಯ ಸರಕಾರಕ್ಕೂ ಯಾವ ಸಹಾಯವನ್ನೂ ನೀಡಿಲ್ಲ. ಮುಖ್ಯಮಂತ್ರಿಯ ಜತೆ ನಡೆಸಿದ ವಿಡಿಯೊ ಸಂವಾದದಲ್ಲೂ ಕರ್ನಾಟಕಕ್ಕೆ ನೆರವು ನೀಡುವ ಬಗ್ಗೆ ಉಲ್ಲೇಖಿಸಿಲ್ಲ. ಶ್ರಮಿಕ ವರ್ಗಕ್ಕೆ ಪರಿಹಾರ ಘೋಷಿಸದೆ ಕೇವಲ ಸಲಹೆ ನೀಡಿದರೆ ಏನು ಪ್ರಯೋಜನ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.

ನಮಸ್ತೆ ಟ್ರಂಪ್‌ನಿಂದಲೂ ಸೋಂಕು: ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನಗಳಲ್ಲಿ ಕೊರೋ ಹಬ್ಬಲು ಫೆ.24ರಂದು ಅಹ್ಮದಾಬಾದ್‌ನಲ್ಲಿ ನಡೆಸಿದ ನಮಸ್ತೆ ಟ್ರಂಪ್ ಕಾರ್ಯಕ್ರಮವೇ ಕಾರಣ. ಈ ಕಾರ್ಯಕ್ರಮ ನಡೆಸುವ ಮೊದಲೇ ಅಮೆರಿಕದಲ್ಲಿ ಕೊರೋನ ಹರಡಲು ಆರಂಭವಾಗಿತ್ತು. 20 ಸಾವಿರದಷ್ಟು ವಿದೇಶಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈಗ ಇಡೀ ದೇಶದಲ್ಲಿ ಅಹ್ಮದಾಬಾದ್‌ನಲ್ಲೇ ಹೆಚ್ಚು ಜನ ಸೋಂಕಿಗೆ ತುತ್ತಾಗಿದ್ದಾರೆ ಎಂದು ಆರೋಪಿಸಿ ಹರೀಶ್ ಕುಮಾರ್ ದೇಶಕ್ಕೆ ಕೊರೋನ ಸೋಂಕು ಯಾವ ಮೂಲದಿಂದ ಬಂದಿದೆ ಎಂಬ ವಿಚಾರವನ್ನು ಕೇಂದ್ರ ಸರಕಾರ ಬಹಿರಂಗಪಡಿಸಬೇಕು. ಸೋಂಕಿನ ಮೂಲದ ಕುರಿತು ದಾರಿ ತಪ್ಪಿಸುತ್ತ್ತಿರುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶಾಸಕರಾದ ಯು.ಟಿ. ಖಾದರ್, ಐವನ್ ಡಿಸೋಜ, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಮೊಹಿಯುದ್ದೀನ್ ಬಾವ, ಜೆ.ಆರ್. ಲೋಬೊ, ಮುಖಂಡರಾದ ಸಂತೋಷ್ ಶೆಟ್ಟಿ, ಮುಹಮ್ಮದ್ ಮೋನು, ಸದಾಶಿವ ಉಳ್ಳ್ಳಾಲ್ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News