ಕೊರೋನ ಲಸಿಕೆ ಸಂಬಂಧಿ ಸಂಶೋಧನೆ ಕದಿಯಲು ಚೀನಿ ಹ್ಯಾಕರ್‌ಗಳ ಯತ್ನ?
ವಾಶಿಂಗ್ಟನ್, ಮೇ 12: ನೋವೆಲ್-ಕೊರೋನ ವೈರಸ್ ವಿರುದ್ಧದ ಲಸಿಕೆಯನ್ನು ಅಭಿವೃದ್ಧಿಪಡಿಸಲು ನಡೆಸಲಾಗುತ್ತಿರುವ ಸಂಶೋಧನೆಗಳನ್ನು ಕದಿಯಲು ಚೀನಾದ ಕನ್ನಗಾರರು (ಹ್ಯಾಕರ್) ಪ್ರಯತ್ನಿಸುತ್ತಿದ್ದಾರೆ ಎಂಬುದಾಗಿ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಶನ್ (ಎಫ್‌ಬಿಐ) ಮತ್ತು ಸೈಬರ್ ಭದ್ರತಾ ಪರಿಣತರು ಭಾವಿಸಿದ್ದಾರೆ ಎಂದು ಎರಡು ಪತ್ರಿಕೆಗಳು ಸೋಮವಾರ ವರದಿ ಮಾಡಿವೆ.
ಕೋವಿಡ್-19ಗೆ ಲಸಿಕೆ ಅಭಿವೃದ್ಧಿಪಡಿಸಲು ಸರಕಾರಗಳು ಮತ್ತು ಖಾಸಗಿ ಕಂಪೆನಿಗಳು ಪ್ರಯತ್ನಗಳನ್ನು ನಡೆಸುತ್ತಿರುವಂತೆಯೇ, ಕನ್ನ ಹಾಕಲು ಚೀನಾ ನಡೆಸುತ್ತಿದೆಯೆನ್ನಲಾದ ಪ್ರಯತ್ನಗಳ ಬಗ್ಗೆ ಎಚ್ಚರಿಕೆ ನೀಡಲು ಎಫ್‌ಬಿಐ ಮತ್ತು ಆಂತರಿಕ ಭದ್ರತಾ ಇಲಾಖೆ ನಿರ್ಧರಿಸಿವೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಮತ್ತು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗಳು ವರದಿ ಮಾಡಿವೆ.
ಕೋವಿಡ್-19ರ ಚಿಕಿತ್ಸೆಗಳು ಮತ್ತು ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿಗಳು ಮತ್ತು ಬೌದ್ಧಿಕ ಆಸ್ತಿಯ ಮೇಲೂ ಹ್ಯಾಕರ್‌ಗಳು ಕಣ್ಣು ಹಾಕಿದ್ದಾರೆ ಎಂದು ಪತ್ರಿಕೆಗಳು ಆರೋಪಿಸಿವೆ.
ಈ ಹ್ಯಾಕರ್‌ಗಳು ಚೀನಾ ಸರಕಾರದೊಂದಿಗೆ ನಂಟು ಹೊಂದಿದ್ದಾರೆ ಎಂಬುದಾಗಿಯೂ ಅಮೆರಿಕದ ಅಧಿಕಾರಿಗಳು ಆರೋಪಿಸಿದ್ದಾರೆ.