ಮಂಗಳೂರಿನಿಂದ ಜಾರ್ಖಂಡ್‍ಗೆ ಕಾಲ್ನಡಿಗೆಯಲ್ಲಿ ಹೊರಟ ನೂರಾರು ಕಾರ್ಮಿಕರು
ಬಂಟ್ವಾಳ, ಮೇ 13: ಮನವೊಲಿಸಲು ಅಧಿಕಾರಿಗಳು ಶತ ಪ್ರಯತ್ನಪಟ್ಟರೂ ಅವರನ್ನು ಲೆಕ್ಕಿಸದೆ ಜಾರ್ಖಂಡ್‍ಗೆ ಕಾಲ್ನಡಿಗೆಯಲ್ಲೇ ಹೊರಡುತ್ತೇವೆ ಎಂದು ಹಠ ಹಿಡಿದು ಮಂಗಳೂರಿನಿಂದ ಹೊರಟ ಮಹಿಳೆಯರು, ಮಕ್ಕಳ ಸಹಿತ ನೂರಾರು ಕಾರ್ಮಿಕರನ್ನು ಕೊನೆಗೂ ಪೊಲೀಸರು ಮತ್ತು ಸಾರ್ವಜನಿಕರು ಮನವೊಲಿಸಿ ಬಂಟ್ವಾಳದ ಬಂಟರ ಭವನದಲ್ಲಿ ತಾತ್ಕಾಲಿಕವಾಗಿ ಉಳಿಯುವಂತೆ ಮಾಡುವಲ್ಲಿ ಮಂಗಳವಾರ ಮಧ್ಯ ರಾತ್ರಿ 2 ಗಂಟೆಯ ವೇಳೆಗೆ ಯಶಸ್ವಿಯಾದರು.
ಲಾಕ್‍ಡೌನ್‍ನಿಂದ ಮಂಗಳೂರಿನ ವಿವಿಧ ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜಾರ್ಖಂಡ್ ರಾಜ್ಯದ ಸುಮಾರು 500ಕ್ಕೂ ಅಧಿಕ ಕಾರ್ಮಿಕರು ಮಂಗಳೂರಿನಿಂದ ಕಾಲ್ನಡಿಗೆಯಲ್ಲಿ ತಮ್ಮ ರಾಜ್ಯಕ್ಕೆ ತೆರಲುವುದಾಗಿ ಮಂಗಳವಾರ ರಾತ್ರಿ 9 ಗಂಟೆಯ ಸುಮಾರಿಗೆ ಹೊರಟ್ಟಿದ್ದರು. ಈ ಬಗ್ಗೆ ವಿಷಯ ತಿಳಿದ ಅಧಿಕಾರಿಗಳು ಮಾರ್ಗ ಮಧ್ಯೆ ಕಾರ್ಮಿಕರನ್ನು ತಡೆದು ಮನವೊಲಿಸಲು ಶತ ಪ್ರಯತ್ನ ಪಟ್ಟರೂ ಅಧಿಕಾರಿಗಳ ಮಾತುಗಳನ್ನು ಲೆಕ್ಕಿಸದೆ ತಮ್ಮ ಪ್ರಯಾಣವನ್ನು ಮುಂದುವರಿಸಿದರು.
ಮಂಗಳೂರು ನಗರದಿಂದ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಮಕ್ಕಳು, ಮಹಿಳೆಯರು ಹಾಗೂ ತಮ್ಮ ಬಟ್ಟೆಬರೆಗಳನ್ನು ಗಂಟುಮೂಟೆ ಕಟ್ಟಿ ಹೊರಟ ಕಾರ್ಮಿಕರನ್ನು ಮಾರ್ಗ ಮಧ್ಯೆ ವಿವಿಧೆಡೆ ತಡೆದು ನಿಲ್ಲಿಸಿದ ಅಧಿಕಾರಿಗಳು, ಮೂರು ದಿನ ಇಲ್ಲೇ ಇರಿ. ಬಳಿಕ ನಿಮ್ಮನ್ನು ಊರಿಗೆ ತಲುಪಿಸಲು ರೈಲಿನ ವ್ಯವಸ್ಥೆ ಮಾಡುತ್ತೇವೆ. ಅಲ್ಲಿಯವರೆಗೆ ಊಟ, ತಿಂಡಿಯ ವ್ಯವಸ್ಥೆಯೂ ಮಾಡುತ್ತೇವೆ ಎಂದು ಮನವೊಲಿಸಿದರು. ಆದರೆ ಕಾರ್ಮಿಕರು ಯಾರ ಮಾತನ್ನೂ ಲೆಕ್ಕಿಸದೆ ತಮ್ಮ ಪ್ರಯಾಣವನ್ನು ಮುಂದುವರಿಸಿದರು.
ಕೊನೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿ ಮುಗಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ವ್ಯಾಪ್ತಿಯ ಗಡಿಯಾದ ಆರ್ಕುಲದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪೊಲೀಸರು ಕಾರ್ಮಿಕರ ಮನವೊಲಿಸಲು ಪ್ರಯತ್ನಿಸಿದರು. ಆರಂಭದಲ್ಲಿ ಯಾರ ಮಾತಿಗೂ ಜಗ್ಗದ ಕಾರ್ಮಿಕರು ಕೊನೆಗೆ ಬ್ರಹ್ಮರಕೊಟ್ಲು ಟೋಲ್‍ಗೇಟ್ ಸಮೀಪದಲ್ಲಿರುವ ಬಂಟರ ಭವನದಲ್ಲಿ ಉಳಿದುಕೊಳ್ಳಲು ಎಸ್ಪಿ ಮಾಡಿದ ಮನವಿಗೆ ತಲೆಯಾಡಿಸಿದರು.
ಕಾರ್ಮಿಕರು ನಡೆದುಕೊಂಡು ಬರುವ ವಿಷಯ ತಿಳಿದ ಕೆಲವರು ಕಾರ್ಮಿಕರಿಗೆ ಫರಂಗಿಪೇಟೆ ಮತ್ತು ತುಂಬೆಯಲ್ಲಿ ಹಣ್ಣು, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಸುಮಾರು 20 ಕಿಲೋ ಮೀಟರ್ ನಡೆದುಕೊಂಡು ಬಂದ ಕಾರ್ಮಿಕರು ಆದಾಗಲೇ ಸುಸ್ತಾಗಿದ್ದರು. ಆದರೂ ತಮ್ಮ ಪ್ರಯಾಣವನ್ನು ಮುಂದುವರಿಸಿಕೊಂಡು ಬಂಟರ ಭವನದ ಬಳಿಗೆ ರಾತ್ರಿ 2 ಗಂಟೆಯ ಸುಮಾರಿಗೆ ಬಂದ ಕಾರ್ಮಿಕರನ್ನು ಪೊಲೀಸರು ಹಾಗೂ ತುಂಬೆ, ಫರಂಗಿಪೇಟೆಯಲ್ಲಿ ನೀರು, ಮುಸುಂಬಿಯನ್ನು ಹಂಚಿದ ಯುವಕರು ಮನವೊಲಿಸಿ ಕೊನೆಗೂ ಬಂಟರ ಭವನಕ್ಕೆ ತೆರಲುವಂತೆ ಮಾಡುವಲ್ಲಿ ಯಶಸ್ವಿಯಾದರು. ಈ ವೇಳೆಯೂ ಕೆಲವು ಕಾರ್ಮಿಕರು ತಮ್ಮ ಪ್ರಯಾಣವನ್ನು ಮುಂದುವರಿಸಲು ಮುಂದಾದರು. ಅವರನ್ನು ಹರಸಾಹಸ ಪಟ್ಟು ಭವನಕ್ಕೆ ತೆರಳುವಂತೆ ಮಾಡಲಾಯಿತು.
ಬಂಟರ ಭವನದಲ್ಲಿ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ಬಳಿಕ, ನಿಮ್ಮನ್ನು ಮೂರು ದಿನಗಳ ಬಳಿಕ ನಿಮ್ಮ ಊರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಅಲ್ಲಿಯ ವರೆಗೆ ಇಲ್ಲಿಯೇ ತಂಗಿರಿ. ಊಟ, ತಿಂಡಿಯ ವ್ಯವಸ್ಥೆಯನ್ನು ನಾವು ಮಾಡುತ್ತೇವೆ ಎಂದು ಮನವೊಲಿಸಿದರು. ಈ ವೇಳೆಯೂ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಬಳಿಕ ಕಾರ್ಮಿಕರು ಭವನದ ಪಾರ್ಕಿಂಕ್‍ನಲ್ಲಿ ವಿಶ್ರಾಂತಿ ಪಡೆದು ನಿದ್ದೆಗೆ ಜಾರಿದರು.
''ಊಟ, ತಿಂಡಿ ಇಲ್ಲದೆ ಇನ್ನೆಷ್ಟು ದಿನ ಇರಬೇಕು ?''
ಲಾಕ್‍ಡೌನ್‍ನ ಬಳಿಕ ನಾವು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದೇವೆ. ತಮ್ಮ ಊರಿಗೆ ಹೋಗಲು ಯಾವುದೇ ವ್ಯವಸ್ಥೆಯನ್ನು ಸರಕಾರ ಆಗಲಿ ಅಧಿಕಾರಿಗಳು ಆಗಲಿ ಮಾಡಿಲ್ಲ. ಎರಡು ದಿನಗಳ ಹಿಂದೆ ಊರಿಗೆ ಹೋಗಲು ನಮಗೆ ಮಂಗಳೂರಿನಿಂದ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಕೆಲವು ಅಧಿಕಾರಿಗಳು ಹೇಳಿದ್ದರು. ಆದರೆ ಎರಡು ದಿನ ಕಾದರೂ ರೈಲಿನ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಪುರ ಭವನ ಸಹಿತ ನಗರದ ವಿವಿಧೆಡೆ ಇದ್ದ ನಾವೆಲ್ಲರು ಕಾಲ್ನಡಿಗೆಯಲ್ಲೇ ಊರಿಗೆ ತೆರಳಲು ಮುಂದಾಗಿದ್ದೇವೆ. ನಮ್ಮಲ್ಲಿ ಹೆಚ್ಚಿನವರು ಮೂರು ಹೊತ್ತಿನ ಊಟಕ್ಕೂ ಸಂಕಷ್ಟ ಪಡುವವರು. ಸರಕಾರ ನಮಗೆ ಊಟದ ವ್ಯವಸ್ಥೆಯೂ ಮಾಡುತ್ತಿಲ್ಲ. ಇನ್ನೂ ಎಷ್ಟು ದಿನ ಊಟ ಇಲ್ಲದೆ ಇರಬೇಕು. ಅದಕ್ಕಾಗಿ ನಾವೆಲ್ಲರೂ ನಡೆದುಕೊಂಡೇ ಊರಿಗೆ ಹೋಗಲು ತೀರ್ಮಾನಿಸಿದ್ದೇವೆ ಎಂದು ತಂಡದಲ್ಲಿದ್ದ ಕಾರ್ಮಿಕನೋರ್ವ ಹೇಳಿದ್ದಾನೆ.
ಠಾಣೆಯಿಂದ ಠಾಣೆಗೆ ಅಲೆದಾಡಿಸಿದರು
ಊರಿಗೆ ಹೋಗಬೇಕಾದರೆ ಪೊಲೀಸ್ ಠಾಣೆಯಲ್ಲಿ ಪಾಸ್ ಪಡೆದುಕೊಳ್ಳಬೇಕು ಎಂದು ಕೆಲವು ಅಧಿಕಾರಿಗಳು ಹೇಳಿದ್ದಾರೆ. ಹಾಗಾಗಿ ನಾವು ಪಾಸ್‍ಗಾಗಿ ಬಂದರ್ ಠಾಣೆಗೆ ಹೋದಾಗ ಪಾಂಡೇಶ್ವರ ಠಾಣೆಗೆ ಕಳುಹಿಸಿದರು. ಪಾಂಡೇಶ್ವರ ಠಾಣೆಗೆ ಹೋದಾಗ ಇಲ್ಲಿ ಸಿಗುವುದಿಲ್ಲ ಎಂದರು. ಇನ್ನು ನಾವು ಎಲ್ಲಿಗೆ ಹೋಗಬೇಕು. ನಮ್ಮೊಂದಿಗೆ ಇದ್ದ ಉತ್ತರ ಪ್ರದೇಶ, ಬಿಹಾರದ ಕಾರ್ಮಿಕರನ್ನು ಈಗಾಗಲೇ ಅವರ ಊರಿಗೆ ಕಳುಹಿಸಲಾಗಿದೆ. ಜಾರ್ಖಂಡ್‍ನವರಾದ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗಿದೆ. ಇದು ಯಾಕೆಂದು ಗೊತ್ತಾಗುತ್ತಿಲ್ಲ ಎಂದು ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದರು.
ಮಾರ್ಗ ಮಧ್ಯೆ ಮುಂಸಬಿ, ನೀರು ವಿತರಣೆ
ಮಂಗಳೂರಿನಿಂದ ಕಾರ್ಮಿಕರು ನಡೆದುಕೊಂಡು ಬರುವ ವಿಷಯ ತಿಳಿದ ಫರಂಗಿಪೇಟೆಯಲ್ಲಿ ಹಣ್ಣುಹಂಪಲು ವ್ಯಾಪಾರಿ ಸಲೀಂ ಕುಂಪನಮಜಲು ನೇತೃತ್ವದಲ್ಲಿ ಕಾರ್ಮಿಕರಿಗೆ ಮುಸಂಬಿ ವಿತರಿಸಲಾಯಿತು. ಕಾರ್ಮಿಕರು ತುಂಬೆ ತಲುಪುತ್ತಿದ್ದಂತೆ ಇರ್ಫಾನ್ ಮತ್ತು ಗ್ರಾಪಂ ಸದಸ್ಯ ಝಹೂರ್ ನೇತೃತ್ವದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಅಲ್ಲದೆ ಪುದು ಗ್ರಾಪಂ ಸದಸ್ಯ ಹಾಶಿರ್ ಪೇರಿಮಾರ್ ನೇತೃತ್ವದಲ್ಲಿ ಮತ್ತೆ ಮುಸಂಬಿ ವಿತರಿಸಲಾಯಿತು. ಕಾರ್ಮಿಕರು ನೀರು, ಮುಸಂಬಿಗೆ ಮುಗಿಬಿದ್ದ ದೃಶ್ಯ ಮನ ಕರಗುವಂತಿತ್ತು.