ಯುಎಇಯಿಂದ ಆಗಮಿಸಿದ ಅನಿವಾಸಿ ಕನ್ನಡಿಗರನ್ನು ನಿರ್ಲಕ್ಷಿಸಿದ ದ.ಕ. ಜಿಲ್ಲಾಡಳಿತ: ಸಾಮಾಜಿಕ ಸಂಘಟನೆಗಳ‌‌ ಆರೋಪ

Update: 2020-05-13 04:03 GMT

ಮಂಗಳೂರು, ಮೇ 13: ಕೊರೋನ-ಲಾಕ್‌ಡೌನ್ ಹಿನ್ನಲೆಯಲ್ಲಿ ಯುಎಇಯಲ್ಲಿ ಅತಂತ್ರರಾಗಿದ್ದ ಅನಿವಾಸಿ ಕನ್ನಡಿಗರನ್ನು ಹೊತ್ತು ತಂದ ವಿಮಾನವು ಮಂಗಳವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ‌ಬಂದಿಳಿದರೂ ದ.ಕ.ಜಿಲ್ಲಾಡಳಿತವು ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ರಾತ್ರಿ ಬಂದ ಪ್ರಥಮ ವಿಮಾನದಲ್ಲಿ 176 ಪ್ರಯಾಣಿಕರಿದ್ದರು ಎಂದು‌ ಜಿಲ್ಲಾಡಳಿತ ಹೇಳಿಕೊಂಡರೂ ಸಾಮಾಜಿಕ ಸಂಘಟನೆಗಳ ಪ್ರಕಾರ ಈ ವಿಮಾನದಲ್ಲಿ 88 ಪುರುಷರು, 84 ಮಹಿಳೆಯರು ಮತ್ತು 7 ಮಂದಿ ಮಕ್ಕಳ ಸಹಿತ 179 ಮಂದಿ ಇದ್ದರು. ಆ ಪೈಕಿ ಸುಮಾರು‌ 150 ಮಂದಿ ಹೊಟೇಲ್ ಬುಕ್ ಮಾಡಿದ್ದರು.

ಉಳಿದ 30 ಮಂದಿ ಹಾಸ್ಟೆಲ್‌ಗಳಲ್ಲಿ‌ ಕ್ವಾರಂಟೈನ್‌ಗೆ ಒಳಗಾಗಲು ಬಯಸಿದ್ದರು. ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಅನಿವಾಸಿ ಕನ್ನಡಿಗರ ಕ್ವಾರಂಟೈನ್‌ಗೆ ಹಾಸ್ಟೆಲ್‌ಗಳನ್ನು ಬಿಟ್ಟುಕೊಡಲು ಸಿದ್ದವಿರುವುದಾಗಿ ತಿಳಿಸಿದ್ದರು. ಆದರೆ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಯಾವುದೇ ಆಸಕ್ತಿ‌ ತೋರಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಮಂಗಳವಾರ ರಾತ್ರಿ‌ ಸುಮಾರು 10:10ಕ್ಕೆ‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅನಿವಾಸಿ ಕನ್ನಡಿಗರನ್ನು ಆರೋಗ್ಯ ತಪಾಸಣೆಯ ಬಳಿಕ‌ ಆಯಾ ಜಿಲ್ಲೆಯಲ್ಲಿ ಕಲ್ಪಿಸಲಾದ ಕ್ವಾರಂಟೈನ್ ಕೇಂದ್ರಗಳಿಗೆ ರಾತ್ರಿ‌ ಬಸ್ಸುಗಳಲ್ಲಿ ಕರೆದೊಯ್ಯಲಾಯಿತು. ಹೊಟೇಲ್/ಲಾಡ್ಜ್‌ಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿದ್ದರೂ ದಿನದ ಬಾಡಿಗೆ ದರ ದುಬಾರಿಯಾಗಿದೆ ಮತ್ತು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಜಿಲ್ಲಾಡಳಿತ ನಮ್ಮನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಕೆಲವು‌ ಪ್ರಯಾಣಿಕರು ತಮ್ಮ ಮನೆಯವರು ಹಾಗೂ ಸ್ನೇಹಿತರಲ್ಲಿ ದೂರಿಕೊಂಡ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ‌‌ ಮಧ್ಯೆ ಹೊಟೇಲ್/ಲಾಡ್ಜ್‌ಗಳಲ್ಲಿ ರೂಮ್ ಬುಕ್ ಮಾಡಲಾಗದ ಅಶಕ್ತ ಕನ್ನಡಿಗರು ಜಿಲ್ಲಾಡಳಿತದ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಡರಾತ್ರಿ ಸುಮಾರು 2 ಗಂಟೆಯ ಬಳಿಕ ನಗರದ ಲಾಡ್ಜ್‌ವೊಂದರಲ್ಲಿ ತಾತ್ಕಾಲಿಕವಾಗಿ ತಂಗಲು ವ್ಯವಸ್ಥೆ ಕಲ್ಪಿಸಿದೆ ಎನ್ನಲಾಗಿದೆ. ಈ‌ ಮಧ್ಯೆ ಕೆಲವರಿಗೆ ಸರಿಯಾದ ಊಟದ ವ್ಯವಸ್ಥೆಯನ್ನು ಕೂಡ ಜಿಲ್ಲಾಡಳಿತ ಮಾಡಿಲ್ಲ ಎಂಬ ಆರೋಪವಿದೆ. ಹಸಿವಿನಿಂದ ತಾಳಲಾರದೆ ಕೆಲವು ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಊಟದ ವ್ಯವಸ್ಥೆ ಕಲ್ಪಿಸಿದರು ಎಂದು ಮೂಲವೊಂದು ತಿಳಿಸಿದೆ.

* ಮಂಗಳವಾರ ‌ರಾತ್ರಿ ಬಂದ ಪ್ರಯಾಣಿಕರ ಪೈಕಿ ಬಹುತೇಕ ಮಂದಿ ರಮಝಾನ್‌ನ ಉಪವಾಸಿಗರಾಗಿದ್ದು, ಅವರಿಗೆ ಸಹರಿ ವ್ಯವಸ್ಥೆಯನ್ನು ‌ಕೂಡ ಜಿಲ್ಲಾಡಳಿತ ಮಾಡಿರಲಿಲ್ಲ ಎನ್ನಲಾಗಿದೆ. ಮಾಹಿತಿ ತಿಳಿದ ಹೋಪ್ ಫೌಂಡೇಶನ್ ಮಂಗಳೂರು ಮತ್ತು‌ ಅಲ್ ಸಾದ್ ಜೆಪ್ಪು‌ ತಂಡವು ಉಪವಾಸಿಗರಿಗೆ ಸಹರಿ ವ್ಯವಸ್ಥೆ ಕಲ್ಪಿಸಿತು ಎಂದು ತಿಳಿದು ಬಂದಿದೆ.

ಕುಡಿಯಲು ನೀರಿನ ವ್ಯವಸ್ಥೆಯೂ ಇರಲಿಲ್ಲ: ಆರೋಪ

ದಕ್ಷಿಣ ಕನ್ನಡ ಜಿಲ್ಲಾಡಳಿತ ಸಭೆಗಳ ಮೇಲೆ ಸಭೆ ನಡೆಸಿದರೂ ವಿದೇಶದಿಂದ ಪ್ರಥಮ ವಿಮಾನದಲ್ಲಿ ಬಂದವರ ಪೈಕಿ ನಾವು 33 ಮಂದಿ ತೀರಾ ಸಂಕಷ್ಟ ಅನುಭವಿಸಿ ಬೆಳಗಿನ‌ ಜಾವ ಕ್ವಾರಂಟೈನ್ ರೂಮ್ ತಲುಪಿದೆವು. ಈ ಪೈಕಿ ಕೆಲವು ಗರ್ಭಿಣಿಯರೂ ಇದ್ದು, ಅವರು ಬಹಳ ತ್ರಾಸಪಟ್ಟಿದ್ದಾರೆ. ಭಾರಿ ಪೊಲೀಸ್ ಬಂದೋಬಸ್ತ್ ಇದ್ದರೂ ಕುಡಿಯಲು ನೀರು ಕೊಡುವ ವ್ಯವಸ್ಥೆಯೂ ಇರಲಿಲ್ಲ ಎಂದು ಮಹಿಳೆಯೊಬ್ಬರು ಕಣ್ಣೀರಿಟ್ಟಿದ್ದಾರೆ.

ಇನ್ನು,‌ ಉಡುಪಿ ಜಿಲ್ಲಾಧಿಕಾರಿ ವೀಡಿಯೊದಲ್ಲಿ ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳುತ್ತಿದ್ದರೂ, ಬೆಳಗ್ಗೆ ಮನೆಯಿಂದ ಹೊರಟು,‌ ಸಂಜೆ ವಿಮಾನದಲ್ಲಿ ಕುಳಿತು, ರಾತ್ರಿ 10 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದವರನ್ನು ಅಲ್ಲಿ ಇಲ್ಲಿ ಸುತ್ತಾಡಿಸಿ, ಬೆಳಗ್ಗೆ‌ 5  ಗಂಟೆಗೆ ಕ್ವಾರಂಟೈನ್ ಕೇಂದ್ರವಾಗಿರುವ ಹೋಟೆಲ್‌ಗೆ ತಲುಪಿಸಿದ್ದಾರೆ ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂಕ್ತ ವ್ಯವಸ್ಥೆ ಕಲ್ಪಿಸದ ಸರಕಾರ; ಯು.ಟಿ.ಖಾದರ್ ಆಕ್ರೋಶ

ಮೇ 12 ರಂದು ರಾತ್ರಿ ದುಬೈಯಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ 179 ಪ್ರಯಾಣಿಕರ ಪೈಕಿ 33 ಮಂದಿ ಹಣವಿಲ್ಲದ ಕಾರಣ ಹೋಟೆಲ್ ಬದಲಿಗೆ ಹಾಸ್ಟೆಲ್ ಬುಕ್ ಮಾಡಿದ್ದು, ಅವರಿಗೆ ಸೂಕ್ತ ವ್ಯವಸ್ಥೆ ಮಾಡದೇ ಹಸಿವಿನಿಂದ ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯುವಂತೆ ಮಾಡಿದ ಸರಕಾರದ ವೈಫಲ್ಯವನ್ನು ಮಂಗಳೂರು ಶಾಸಕ ಯು.ಟಿ.ಖಾದರ್ ಖಂಡಿಸಿದ್ದಾರೆ.

ಹಣ ಕೊಟ್ಟು ಹೋಟೆಲ್ ಬುಕ್ ಮಾಡಲು ಅಶಕ್ತರಾದ 33 ಪ್ರಯಾಣಿಕರಿಗೆ ಜಿಲ್ಲಾಡಳಿತ ಸರಕಾರದ ವತಿಯಿಂದ ಸೂಕ್ತ ವ್ಯವಸ್ಥೆ ಮಾಡಬೇಕಿತ್ತು. ಅಂತಹ ಪ್ರಯಾಣಿಕರಿಗೆ ಸರಿಯಾದ ಸೌಲಭ್ಯ ಕಲ್ಪಿಸುವ ಬಗ್ಗೆ ಈ ಹಿಂದೆಯೇ ಜಿಲ್ಲಾಡಳಿತ ಭರವಸೆ ಕೂಡಾ ನೀಡಿತ್ತು. ಆದರೆ ಪ್ರಥಮ ವಿಮಾನದಲ್ಲಿ ಆಗಮಿಸಿರುವ ಇಂತಹ ಪ್ರಯಾಣಿಕರ ಬಗ್ಗೆ ಕರುಣೆ ತೋರದೇ ಅವರು ಮಧ್ಯರಾತ್ರಿ ತನಕ ಹಸಿವಿನಿಂದ ವಿಮಾನ ನಿಲ್ದಾಣದಲ್ಲಿ ಕಾಲ ಕಳೆದಿದ್ದಾರೆ. ರಾತ್ರಿ 2 ಗಂಟೆ ನಂತರ ಅವರನ್ನು ಹೋಟೆಲ್ ಗೆ ರವಾನಿಸಿ ಹಣ ಕಟ್ಟಬೇಕಾದೀತು ಎಂಬ ತಾಕೀತು ಹಾಕಿದ್ದಾರೆ. ಈ ಕ್ರಮ ಸರಿಯಲ್ಲ. ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಇಂದು ಮಾತುಕತೆ ನಡೆಸುವುದಾಗಿ ಯು.ಟಿ.ಖಾದರ್ ತಿಳಿಸಿದ್ದಾರೆ.

*ಜಿಲ್ಲಾಧಿಕಾರಿಯ ವಿರುದ್ಧ ಆಕ್ರೋಶ:

ಈ ಎಲ್ಲಾ ಅವಾಂತರಗಳಿಗೆ ದ.ಕ. ಜಿಲ್ಲಾಧಿಕಾರಿ‌ ಸಿಂಧೂ‌ ಬಿ. ರೂಪೇಶ್ ಅವರೇ ನೇರ ಕಾರಣ ಎಂದು ವಿವಿಧ ಸಾಮಾಜಿಕ ಸಂಘಟನೆಗಳ ಮುಖ್ಯಸ್ಥರು ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿ ಕಾಟಾಚಾರಕ್ಕೆ ಸಭೆ ನಡೆಸಿದರೇ ವಿನಃ ಅನಿವಾಸಿ ಕನ್ನಡಿಗರ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿಲ್ಲ. ಸಾಮಾಜಿಕ ಸಂಘಟನೆಗಳ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಉಚಿತ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುವಂತೆ ವಿವಿಧ ಸಂಘಟನೆಗಳ ಮುಖಂಡರ ಮನವಿಗೆ ಸ್ಪಂದಿಸುವುದಾಗಿ ಹೇಳಿದರೇ ವಿನಃ ಅದರಂತೆ ನಡೆದುಕೊಳ್ಳಲಿಲ್ಲ. ಜಿಲ್ಲೆಯ ಕೆಲವು ಶಿಕ್ಷಣ ಸಂಸ್ಥೆಗಳು ತಮ್ಮ ಹಾಸ್ಟೆಲ್‌ಗಳನ್ನು ಕ್ವಾರಂಟೈನ್‌ಗೆ ಉಚಿತವಾಗಿ ನೀಡುವುದಾಗಿ ಹೇಳಿದ್ದರೂ ಅದರತ್ತ ಗಮನಹರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಒಟ್ಟಿನಲ್ಲಿ ಕೊರೋನ-ಲಾಕ್‌ಡೌನ್ ಹಿನ್ನಲೆಯಲ್ಲಿ ಅತಂತ್ರರಾಗಿ ಬಹು‌ ನಿರೀಕ್ಷೆಯಿಂದ ತವರು ಜಿಲ್ಲೆಗೆ ಕಾಲಿಟ್ಟ ಅನಿವಾಸಿ ಕನ್ನಡಿಗರನ್ನು ಜಿಲ್ಲಾಡಳಿತ ಬರಮಾಡಿಕೊಂಡ ರೀತಿಯ ಬಗ್ಗೆ ವ್ಯಾಪಕ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News