ಅನಿವಾಸಿ ಕನ್ನಡಿಗರ ನೆರವಿಗೆ ಧಾವಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟ ಯುಎಇ ಮತ್ತು ಎಸ್‌ಡಿಪಿಐ

Update: 2020-05-13 04:21 GMT

ಮಂಗಳೂರು, ಮೇ 13: ದುಬೈಯಿಂದ ಆಗಮಿಸಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ತೊಂದರೆಗೀಡಾದ ಅನಿವಾಸಿ ಕನ್ನಡಿಗರ ನೆರವಿಗೆ ಧಾವಿಸಿದ್ದಾಗಿ ಯುಎಇ ಅನಿವಾಸಿ ಕನ್ನಡಿಗರ ಒಕ್ಕೂಟ ಮತ್ತು ಜಿಲ್ಲಾ ಎಸ್‌ಡಿಪಿಐ ಹೇಳಿಕೊಂಡಿವೆ.

ದುಬೈಯಿಂದ 176 ಅನಿವಾಸಿ ಕನ್ನಡಿಗರನ್ನು ಹೊತ್ತ ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ 10:10ಕ್ಕೆ ಬಂದಿಳಿದಾಗ ಅದರಲ್ಲಿದ್ದ 33 ಪ್ರಯಾಣಿಕರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಪೆಯ್ಡ್ ಹೋಟೆಲ್ ಕ್ವಾರಂಟೈನ್ (ಖಾಸಗಿ ಉಳಿದುಕೊಳ್ಳುವಿಕೆ)ಗೆ ಕಳಿಸಲಾಗಿತ್ತು. ಉಳಿದ 33 ಪ್ರಯಾಣಿಕರಲ್ಲಿ ಇಬ್ಬರು ಪುರುಷರು ಮತ್ತು ಅಧಿಕ ಸಂಖ್ಯೆಯ ಮಹಿಳೆಯರು, ವೃದ್ಧೆಯರು, ಗರ್ಭಿಣಿಯರು ಹಾಗೂ ಮಕ್ಕಳು ಇದ್ದರು. ಇವರು ಮಂಜನಾಡಿಯ ಅಲ್‌ ಮದೀನಾ ಮತ್ತು ಬಂಟ್ವಾಳ ಮಾಣಿಯ ವಿದ್ಯಾಸಂಸ್ಥೆಯಲ್ಲಿ ಖಾಸಗಿ ಕ್ವಾರಂಟೈನ್ ಗೆ ಮುಂಚೆಯೇ ನಿರ್ಧರಿಸಿದಂತೆ ತೆರಳಲು ಅನುವಾದರು. ಆದರೆ ಅಲ್ಲಿ ಜಿಲ್ಲಾಡಳಿತ ಯಾವುದೇ ವ್ಯವಸ್ಥೆ ಕಲ್ಪಿಸದ ಕಾರಣ ಸದ್ಯಕ್ಕೆ ಯಾವುದೇ ಕ್ವಾರಂಟೈನ್ ಸೌಲಭ್ಯ ಇಲ್ಲ, ಹಣ ಪಾವತಿಸುವಂತಹ ಖಾಸಗಿ  ಕ್ವಾರಂಟೈನ್ ವ್ಯವಸ್ಥೆ ಮಾಡಿಕೊಳ್ಳಿ ಎಂದು ಎನ್.ಆರ್.ಐ.  ಕೋ ಆರ್ಡಿನೇಟರ್ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ ಸೂಚಿಸಿದರು. ಅಲ್ಲದೆ ಈ ಪ್ರಯಾಣಿಕರ ಲಗೇಜ್ ಗಳನ್ನೂ ತೆಗೆಯಲು ಕೂಡ ವಿಮಾನ ನಿಲ್ದಾಣದಲ್ಲಿ ಯಾವುದೇ ಸಿಬ್ಬಂದಿ ವರ್ಗವಿರಲಿಲ್ಲ. ಪ್ರಯಾಣಿಕರ ಎಲ್ಲಾ ಲಗೇಜನ್ನು ಪ್ರಯಾಣಿಕರಲ್ಲೋರ್ವ ಯುವಕ ಮನ್ಸೂರ್ ಎಂಬವರು ತೆಗೆಯಲು ನೆರವಾದರು. ರಾತ್ರಿ ಬಂದಿಳಿದ ಈ ಅನಿವಾಸಿ ಕನ್ನಡಿಗ ಪ್ರಯಾಣಿಕರು ಮಧ್ಯರಾತ್ರಿಯವರೆಗೆ ಅನ್ನ, ನೀರು ಹಾಗು ಉಳಿದುಕೊಳ್ಳಲು ವ್ಯವಸ್ಥೆಗಳಿಲ್ಲದೆ ಕಂಗಾಲಾಗಿದ್ದರು ಎಂದು ಎಸ್‌ಡಿಪಿಐ ಜಿಲ್ಲಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

ಈ ಮಧ್ಯೆ ಪ್ರಯಾಣಿಕರು ಅನಿವಾಸಿ ಕನ್ನಡಿಗರ ಒಕ್ಕೂಟದ ನಾಯಕ ರಶೀದ್ ಬಿಜೈ ಅವರಿಗೆ ವಿಮಾನ ನಿಲ್ದಾಣದಲ್ಲಿ ಆದ ಕಹಿ ಘಟನೆಯನ್ನು ವಿವರಿಸಿದ್ದು,  ರಶೀದ್ ನೀಡಿದ ಮಾಹಿತಿಯಂತೆ ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ರಾತ್ರಿ 12 ಗಂಟೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ. ಜಿಲ್ಲಾಧ್ಯಕ್ಷ ಅರ್ಷದ್ ಮತ್ತು ಝುಬೈರ್ ಅವರೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ ಜೊತೆ ಚರ್ಚೆ ನಡೆಸಿದರು. ರಾತ್ರಿ ಸುಮಾರು 2 ಗಂಟೆಯವರೆಗೆ ಅತಂತ್ರ ಸ್ಥಿತಿಯಲ್ಲಿದ್ದ ಪ್ರಯಾಣಿಕರಿಗೆ ಕೊನೆಗೂ ಮಂಗಳೂರು ಬಂದರ್‌ನ ಖಾಸಗಿ ಹೋಟೆಲ್ ನಲ್ಲಿ ಕ್ವಾರಂಟೈನ್ ಗೆ ವ್ಯವಸ್ಥೆ ಕಲ್ಪಿಸಲು ಸಹಕರಿಸಿದರು. ರಾಜ್ಯಕ್ಕೆ ಬಂದಿಳಿದ ಪ್ರಥಮ ಅನಿವಾಸಿ ಕನ್ನಡಿಗರ ತಂಡಕ್ಕೆ ಯಾವುದೇ ವ್ಯವಸ್ಥೆಗಳನ್ನು ಮಾಡದ ಜಿಲ್ಲಾಡಳಿತದ ಬೇಜವಾಬ್ದಾರಿತನದ ವಿರುದ್ಧ ಎಸ್‌ಡಿಪಿಐ ಮತ್ತು ಅನಿವಾಸಿ ಕನ್ನಡಿಗರ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸರಕಾರದ ಕ್ವಾರಂಟೈನ್ ವ್ಯವಸ್ಥೆಯನ್ನು ನಂಬಿ ಬಂದಿಳಿದ ಈ 33 ಪ್ರಯಾಣಿಕರಿಗೆ ಉಚಿತ ಆಹಾರದ ವ್ಯವಸ್ಥೆಯನ್ನು ಸೈಫ್ ಸುಲ್ತಾನ್ ನೇತೃತ್ವದ ಹೋಪ್ ಫೌಂಡೇಶನ್ ಮತ್ತು ಜೆಪ್ಪುವಿನ ಅಲ್ ಸಾದ್ ಯಂಗ್‌ಮೆನ್ಸ್ ತಂಡ ಹಾಗೂ ಲಾಡ್ಜಿಂಗ್ ವ್ಯವಸ್ಥೆ ಕಲ್ಪಿಸಲು  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ  ಮತ್ತು ಎಸ್‌ಡಿಪಿಐ ನೇತೃತ್ವದ ತಂಡ ಶ್ರಮಿಸಿದೆ ಎಂದು ಪ್ರಕಟನೆ ತಿಳಿಸಿದೆ.

 ನೆರೆಯ ಕೇರಳ ರಾಜ್ಯ ಅಲ್ಲಿನ ಅನಿವಾಸಿಗಳಿಗೆ ಉಚಿತ ಕ್ವಾರಂಟೈನ್ ಗೆ ಅತ್ಯುತ್ತಮ ವ್ಯವಸ್ಥೆ ಮಾಡಿರುವಾಗ ಕರ್ನಾಟಕದ ಅನಿವಾಸಿಗಳ ಬಗ್ಗೆ ಸರಕಾರ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಇನ್ನಾದರೂ ಸರಕಾರ ಸೂಕ್ತ ಕ್ರಮ ಕೈಗೊಂಡು ಅನಿವಾಸಿಗಳಿಗೆ ನೆರವಾಗಬೇಕು ಎಂದು ಅನಿವಾಸಿ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಅದಲ್ಲದೆ  ಅನಿವಾಸಿಗಳಿಗೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಿಕೊಡುವ ಬಗ್ಗೆ ಜಿಲ್ಲಾಧಿಕಾರಿ ಇನ್ನಾದರು ಭರವಸೆ ಮೂಡಿಸಬೇಕು ಮತ್ತು ಇಂತಹ ಅತಂತ್ರ ಸ್ಥಿತಿಯಲ್ಲಿ ಎನ್‌ಜಿಒ ಸಂಘಟನೆಗಳನ್ನು ವಿಶ್ವಾಸಕ್ಕೆ ಜಿಲ್ಲಾಡಳಿತ ತೆಗೆದುಕೊಳ್ಳಬೇಕೆಂದು ಅನಿವಾಸಿ ಕನ್ನಡಿಗರ ಒಕ್ಕೂಟ ಯುಎಇ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News