ಕೊರೋನವನ್ನು ಮಣಿಸಿದ ಸ್ಪೇನ್‌ನ 113 ವರ್ಷದ ವೃದ್ಧೆ
ಮ್ಯಾಡ್ರಿಡ್(ಸ್ಪೇನ್) ಮೇ 13:ಸ್ಪೇನ್‌ನಲ್ಲಿ ಜೀವಿಸುತ್ತಿರುವ ಅತ್ಯಂತ ಹಿರಿಯ ವ್ಯಕ್ತಿಯಾಗಿರುವ 113ರ ವಯಸ್ಸಿನ ವೃದ್ಧೆಯೊಬ್ಬರು ನಿವೃತ್ತರ ಮನೆಯಲ್ಲಿ ಕೊರೋನ ವೈರಸ್ ವಿರುದ್ಧ ಜಯಶಾಲಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ. ನಿವೃತ್ತರ ಮನೆಯಲ್ಲಿ ದ್ದ ಹಲವು ವೃದ್ಧರು ಕೊರೋನ ವೈರಸ್‌ಗೆ ಸಾವನ್ನಪ್ಪಿದ್ದಾರೆ.
ಅಮೆರಿಕದಲ್ಲಿ ಜನಿಸಿರುವ ಈಗ ಸ್ಪೇನ್‌ನಲ್ಲಿ ಖಾಯಂ ಆಗಿ ನೆಲೆನಿಂತಿರುವ ಮರಿಯಾ ಬ್ರಾನ್ಯಾಸ್‌ಗೆ ಪೂರ್ವ ನಗರ ಒಲ್ಟಾದಲ್ಲಿರುವ ಸಾಂತಾ ಮರಿಯ ಡೆಲ್‌ಟುರಾ ಕೇರ್ ಹೋಮ್‌ನಲ್ಲಿರುವಾಗ ಎಪ್ರಿಲ್‌ನಲ್ಲಿ ಕೊರೋನ ಸೋಂಕು ತಗಲಿತ್ತು. ಮರಿಯಾ ಕೇರ್ ಹೋಮ್‌ನಲ್ಲಿ ಕಳೆದ 20 ವರ್ಷಗಳಿಂದ ನೆಲೆಸಿದ್ದಾರೆ. ತನ್ನ ಕೊಠಡಿಯಲ್ಲಿ ಪ್ರತ್ಯೇಕವಾಗಿದ್ದುಕೊಂಡು ಉಸಿರಾಟಕ್ಕೆ ಸಂಬಂಧಿಸಿ ಸಮಸ್ಯೆಯ ವಿರುದ್ಧ ಹೋರಾಡಿದ್ದಾರೆ.
ಮರಿಯಾ ಕೊರೋನದಿಂದ ಬದುಕುಳಿದಿದ್ದು, ಅವರೀಗ ಚೆನ್ನಾಗಿದ್ದಾರೆ. ಮರಿಯಾ ಅವರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕೊರೋನ ಲಕ್ಷಣ ಕಾಣಿಸಿಕೊಂಡಿತ್ತು. ಅವರು ಕಳೆದ ವಾರ ಕೊರೋನ ಪರೀಕ್ಷೆಗೆ ಒಳಗಾಗಿದ್ದಾರೆ. ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಿತ್ತು ಎಂದು ವೃದ್ದಾಶ್ರಮದ ವಕ್ತಾರೆ ತಿಳಿಸಿದ್ದಾರೆ.
ಮೂರು ಮಕ್ಕಳ ತಾಯಿಯಾಗಿರುವ ಮರಿಯಾ ಕೊಠಡಿಯಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿದ್ದಾರೆ. ಅವರ ಆರೋಗ್ಯವನ್ನು ಓರ್ವ ವ್ಯಕ್ತಿ ತಪಾಸಣೆ ನಡೆಸುತ್ತಿದ್ದಾರೆ. ರೆಸಿಡೆನ್ಸಿಯ ಸಿಬ್ಬಂದಿ ತುಂಬಾ ಕರುಣೆ ಉಳ್ಳವರು ಹಾಗೂ ಹೆಚ್ಚು ಗಮನ ನೀಡುತ್ತಾರೆ ಎಂದು ಮರಿಯಾ ಶ್ಲಾಘಿಸಿದ್ದಾರೆ.
ನಿಮ್ಮ ಆರೋಗ್ಯದ ಗುಟ್ಟೇನು ಎಂದು ಕೇಳಿದ ಪ್ರಶ್ನೆಗೆ ಉತ್ತಮ ಆರೋಗ್ಯವನ್ನು ಆನಂದಿಸುತ್ತಿರುವುದು ನನ್ನ ಅದೃಷ್ಟ ಎಂದರು. ಮರಿಯಾ ಅವರ ಕುರಿತಂತೆ ಇತ್ತೀಚೆಗಿನ ದಿನಗಳಲ್ಲಿ ಸ್ಪೇನ್‌ನ ಮಾಧ್ಯಮಗಳು ಹಲವು ಲೇಖನಗಳನ್ನು ಪ್ರಕಟಿಸಿದ್ದವು. ಇವರು ದೇಶದಲ್ಲಿ ನೆಲೆಸಿರುವ ಅತ್ಯಂತ ಹಿರಿಯ ವ್ಯಕ್ತಿ ಎಂದು ಹೇಳಿದ್ದವು.
ಮರಿಯಾ 1907,ಮಾರ್ಚ್ 4ರಂದು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಜನಿಸಿದ್ದರು.ಅವರ ತಂದೆ ಸ್ಪೇನ್‌ನಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದರು. ಮರಿಯಾ ಮೊದಲ ವಿಶ್ವ ಮಹಾಯುದ್ಧ ನಡೆದ ಸಂದರ್ಭದಲ್ಲಿ ಬೋಟ್‌ನಲ್ಲಿ ಸ್ಪೇನ್‌ಗೆ ಬಂದಿದ್ದರು. 1918-19ರಲ್ಲಿ ವಿಶ್ವವ್ಯಾಪಿ ಹಬ್ಬಿದ್ದ ಸ್ಪೇನ್ ಫ್ಲೂ ಸಾಂಕ್ರಾಮಿಕ ಕಾಯಿಲೆ ಹಾಗೂ 1936-39ರಲ್ಲಿ ನಡೆದಿದ್ದ ನಾಗರಿಕ ಯುದ್ಧದ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ.
ಸ್ಪೇನ್ ಕೊರೋನದಿಂದ ಬಾಧಿತವಾಗಿರುವ ದೇಶಗಳ ಪೈಕಿ ಒಂದಾಗಿದ್ದು, ಇಲ್ಲಿ ಕೋವಿಡ್-19ಗೆ 27,000 ಜನರು ಸಾವನ್ನಪ್ಪಿದ್ದಾರೆ.