×
Ad

ಅಮೆರಿಕದಲ್ಲಿ ಸಿಕ್ಕಿ ಹಾಕಿಕೊಂಡ ಭಾರತೀಯರು ಅತಂತ್ರ

Update: 2020-05-13 10:50 IST

ವಾಷಿಂಗ್ಟನ್, ಮೇ 13: ಅಮೆರಿಕದಲ್ಲಿ ಎಚ್-1ಬಿ ಉದ್ಯೋಗ ವೀಸಾ ಅಥವಾ ಹಸಿರುಕಾರ್ಡ್ ಹೊಂದಿರುವ ಹಲವು ಮಂದಿ ಭಾರತೀಯರು ಇದೀಗ ಭಾರತಕ್ಕೆ ವಾಪಸ್ಸಾಗಲು ಸಾಧ್ಯವಾಗದೇ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಲಾಕ್‌ಡೌನ್ ಸಂಬಂಧಿತ ಜಾಗತಿಕ ಪ್ರಯಾಣ ನಿರ್ಬಂಧಗಳ ಹಿನ್ನೆಲೆಯಲ್ಲಿ, ವಿವಿಧೆಡೆ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ತಾಯ್ನಾಡಿಗೆ ವಾಪಸ್ ಕರೆತರಲು ಏರ್‌ ಇಂಡಿಯಾ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದರೂ, ಅಮೆರಿಕದಲ್ಲಿರುವ ಭಾರತೀಯರಿಗೆ ಇದರ ಪ್ರಯೋಜನ ಸಿಗುತ್ತಿಲ್ಲ.

ಭಾರತ ಸರ್ಕಾರ ಕಳೆದ ತಿಂಗಳು ಹೊರಡಿಸಿ, ಕಳೆದ ವಾರ ಪರಿಷ್ಕರಿಸಿದ ಹೊಸ ನಿಬಂಧನೆಗಳ ಅನ್ವಯ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧದ ಅಂಗವಾಗಿ ವಿದೇಶಿಯರ ವೀಸಾ ಮತ್ತು ಐಓಸಿ ಕಾರ್ಡ್‌ಗಳನ್ನು ಅಮಾನತುಪಡಿಸಲಾಗಿದೆ. ಐಓಸಿ ಕಾರ್ಡ್‌ದಾರರಿಗೆ ಭಾರತದಲ್ಲಿ ವೀಸಾಮುಕ್ತ ಪ್ರವಾಸಕ್ಕೆ ಅವಕಾಶವಿತ್ತು.

ಇನ್ನು ಎಚ್-1ಬಿ ಉದ್ಯೋಗ ವೀಸಾ ಪಡೆದಿರುವವರ ಸಮಸ್ಯೆ ಭಿನ್ನ. ಉದಾಹರಣೆಗೆ ನ್ಯೂಜೆರ್ಸಿಯಲ್ಲಿರುವ ಪಾಂಡೆ ದಂಪತಿ (ಹೆಸರು ಬದಲಿಸಲಾಗಿದೆ) ಕಾನೂನಿನ ಪ್ರಕಾರ, 60 ದಿನಗಳ ಒಳಗಾಗಿ ಭಾರತಕ್ಕೆ ವಾಪಸ್ಸಾಗಬೇಕು. ಈ ದಂಪತಿಗೆ ಆರು ಹಾಗೂ ಒಂದು ವರ್ಷದ ಇಬ್ಬರು ಮಕ್ಕಳಿದ್ದು, ಇವರು ಅಮೆರಿಕದ ಪೌರತ್ವ ಹೊಂದಿದ್ದಾರೆ.

ಸೋಮವಾರ ಮಧ್ಯರಾತ್ರಿ ಇವರು ನ್ಯೂಯಾರ್ಕ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಏರ್‌ ಇಂಡಿಯಾ, ಭಾರತೀಯ ವೀಸಾ ಇದ್ದರೂ ಈ ಮಕ್ಕಳು ಭಾರತಕ್ಕೆ ಪ್ರಯಾಣಿಸಲು ಟಿಕೆಟ್ ನೀಡಲು ನಿರಾಕರಿಸಿತು. ಈ ಯುವ ತಂದೆ- ತಾಯಿ ಭಾರತೀಯ ನಾಗರಿಕರು. ಏರ್ ಇಂಡಿಯಾ ಅಧಿಕಾರಿಗಳು ಹಾಗೂ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಸಹಕಾರ ಮನೋಭಾವದವರು; ಆದರೆ ಭಾರತ ಸರ್ಕಾರದ ಹೊಸ ನಿಯಮಾವಳಿಯಿಂದಾಗಿ ಏನೂ ಮಾಡಲಾಗದೇ ಕೈಚೆಲ್ಲಿದರು ಎಂದು ರತ್ನಾ ಪಾಂಡೆ ವಿವರಿಸಿದರು.

ಮಾನವೀಯತೆಯ ಆಧಾರದಲ್ಲಿ ಸರ್ಕಾರ ತನ್ನ ನಿರ್ಧಾರ ಮರುಪರಿಶೀಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಭಾರತೀಯ ಪ್ರಜೆಯಾಗಿರುವ ಅವರು ಅಮೆರಿಕದಲ್ಲಿ ಉದ್ಯೋಗ ಕಳೆದುಕೊಂಡರೂ, ಭವಿಷ್ಯದ ವೀಸಾ ಸಂಕೀರ್ಣತೆಯಿಂದ ಪಾರಾಗುವ ಸಲುವಾಗಿ 60 ದಿನಗಳ ಕಾಲ ಅಮೆರಿಕ ಬಿಡುವಂತಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ಇದೀಗ ತಮ್ಮ ವಾಸ್ತವ್ಯದ ಅವಧಿಯನ್ನು ವಿಸ್ತರಿಸುವಂತೆ ಅಮೆರಿಕದ ಪೌರತ್ವ ಮತ್ತು ಇಮಿಗ್ರೇಶನ್ ಸೇವೆಗಳ ಇಲಾಖೆಗೆ ಮನವಿ ಮಾಡಿಕೊಳ್ಳಲು ಅವರು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News