ದ.ಕ. ಜಿಲ್ಲೆಯಲ್ಲಿ ಮತ್ತೊಂದು ಕೊರೋನ ಪ್ರಕರಣ ಪತ್ತೆ
ಮಂಗಳೂರು, ಮೇ 13: ದ.ಕ. ಜಿಲ್ಲೆಯಲ್ಲಿ ಬುಧವಾರ ಮತ್ತೊಂದು ಕೊರೋನ ಸೋಂಕಿನ ಪಾಸಿಟಿವ್ ಪ್ರಕರಣ ದೃಢಗೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.
ಮಂಗಳೂರು ತಾಲೂಕಿನ ಸೋಮೇಶ್ವರ ಸಮೀಪದ ದಾರಂದಬಾಗಿಲು ನಿವಾಸಿ 38 ವರ್ಷ ಪ್ರಾಯದ ಮಹಿಳೆಗೆ ಇಂದು ಸೋಂಕು ದೃಢಗೊಂಡಿವೆ. ಇವರಿಗೆ ಪಿ.507ರ ಸಂಪರ್ಕದಿಂದ ಸೋಂಕು ತಗುಲಿದೆ. ಈ ಪ್ರಕರಣಕ್ಕೂ ಪಡೀಲ್‌ನ ಖಾಸಗಿ ಆಸ್ಪತ್ರೆಯೇ ಮೂಲ ಎಂದು ತಿಳಿದು ಬಂದಿದೆ.
ಈವರೆಗೆ ಜಿಲ್ಲೆಯಲ್ಲಿ ದೃಢಗೊಂಡ 34 ಪಾಸಿಟಿವ್‌ಗಳ ಪೈಕಿ ದ.ಕ. ಜಿಲ್ಲೆಯ 26, ಕಾಸರಗೋಡಿನ 4, ಕಾರ್ಕಳದ 3 ಮತ್ತು ಭಟ್ಕಳದ 1 ಪ್ರಕರಣ ಸೇರಿವೆ. ಪಾಸಿಟಿವ್‌ಗಳ ಪೈಕಿ 14 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಈಗಾಗಲೆ ಬಿಡುಗಡೆಗೊಂಡಿದ್ದರೆ, 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಪೈಕಿ 15 ಮಂದಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೂವರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.