ಊರು ಸೇರಿದ ಖುಷಿಯ ನಡುವೆ ಅವ್ಯವಸ್ಥೆಯ ಜತೆ ಪರದಾಟ!
► ಪ್ರತ್ಯಕ್ಷದರ್ಶಿ ನೋಡಿದ್ದೇನು?
► ತವರಿಗೆ ಮರಳುವ ಅನಿವಾಸಿಗಳೇ ಗಮನಿಸಿ
► ಜಿಲ್ಲಾಡಳಿತವೂ ಈ ಸಲಹೆಗಳನ್ನು ಪರಿಶೀಲಿಸಲಿ
ಮಂಗಳೂರು, ಮೇ 13: ಕೊರೋನ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿದ್ದ ಅನಿವಾಸಿ ಕನ್ನಡಿಗರು ಸುದೀರ್ಘ ಕಾಯುವಿಕೆಯ ಬಳಿಕ ಹಲವಾರು ಅಡ್ಡಿ ಆತಂಕಗಳ ನಡುವೆಯೂ ಮಂಗಳೂರು ಸೇರಿದ್ದಾರೆ. ವಿದೇಶದಿಂದ ತವರು ನೆಲವನ್ನು ಸೇರಿದ ಖುಷಿಗಿಂತಲೂ ಹೆಚ್ಚಾಗಿ ಅವ್ಯವಸ್ಥೆಯಿಂದಾಗಿ ಅವರು ರಾತ್ರಿಯಿಡೀ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾದ ಬಗ್ಗೆ ಸಾಕಷ್ಟು ಆಕ್ಷೇಪ, ಅಸಮಾಧಾನ ವ್ಯಕ್ತವಾಗಿದೆ.
ದುಬೈಯಿಂದ ಮಂಗಳವಾರ ಸಂಜೆ 5 ಗಂಟೆಗೆ 177 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ವಿಮಾನ ರಾತ್ರಿ 10:10ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿತ್ತು. ಎಲ್ಲ ಪ್ರಯಾಣಿಕರು ವಿಮಾನ ಹಿಡಿಯಲು ದುಬೈಯಲ್ಲಿ ಬೆಳಗ್ಗೆಯೇ ಮನೆಯಿಂದ ಹೊರಟು ಬಂದಿದ್ದರು. ಅದಾಗಲೇ ಸಾಕಷ್ಟು ದಣಿದಿದ್ದ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. ವಿಮಾನದಿಂದ ತಲಾ 10 ಮಂದಿ ಪ್ರಯಾಣಿಕರಂತೆ ಕೆಳಗಿಳಿಸಿ ತಪಾಸಣೆ ನಡೆಸಲಾಯಿತು. ಇದರಿಂದ ಉಳಿದವರು ವಿಮಾನದಲ್ಲೇ ಉಳಿದುಕೊಂಡು ಮತ್ತಷ್ಟು ಕಾಯಬೇಕಾಯಿತು.
ಆರೋಗ್ಯ ತಪಾಸಣೆ ಜತೆಗೆ ಇಮಿಗ್ರೇಶನ್ ಪ್ರಕ್ರಿಯೆ ನಡೆಯಿತು. ತಪಾಸಣೆ ಮುಗಿಸಿದವರಿಗೆ ಆಹಾರ ಕಿಟ್ ನೀಡಲಾಯಿತು. ಆ ಆಹಾರ ಕಿಟ್‌ನಲ್ಲಿ ಇದ್ದಿದ್ದು ಚಪಾತಿ ಮತ್ತು ಪಲ್ಯ. ವಿಮಾನದಲ್ಲಿ ರಮಝಾನ್ ಉಪವಾಸ ಹಿಡಿದವರೂ ಇದ್ದರು. ಪ್ರಯಾಣದ ಜತೆಯಲ್ಲಿ ಉಪವಾಸದಿಂದಿದ್ದ ಅವರಿಗೆ ಖಾಲಿ ಹೊಟ್ಟೆಗೆ ಚಪಾತಿ ತಿನ್ನುವುದು ಕಷ್ಟವಾದ್ದರಿಂದ ಕೆಲವರು ಅದನ್ನು ತಿನ್ನಲಿಲ್ಲ. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿರಲಿಲ್ಲ. ತಾವು ರೂಂ ಸೇರಿದ ಮೇಲೆ ತಿನ್ನುವ ನಿರ್ಧಾರ ಮಾಡಿದ್ದರು. ಈ ನಡುವೆ ಹಂತಹಂತವಾಗಿ ತಪಾಸಣೆಯ ಸಂದರ್ಭ ವಿಮಾನದಲ್ಲಿ ಉಳಿದವರು ಚಡಪಡಿಸುವ ಸ್ಥಿತಿ. ವಿಶಾಲವಾದ ವಿಮಾನ ನಿಲ್ದಾಣದಲ್ಲಿ ಅದಾಗಲೇ ರಾತ್ರಿ ಆಗಿದ್ದರಿಂದ ಎಲ್ಲರನ್ನೂ ಕೆಳಗಿಳಿಸಿ ಅವರಿಗೆ ಕೊಂಚ ರಿಲ್ಯಾಕ್ಸ್ ಮಾಡಲು ಅವಕಾಶ ನೀಡುವ ಮೂಲಕ ತಪಾಸಣೆ ಹಾಗೂ ಇತರ ಪ್ರಕ್ರಿಯೆಗಳನ್ನು ಮುಗಿಸಿದ್ದರೆ ಸಾಕಷ್ಟು ತೊಂದರೆಯನ್ನು ನಿವಾರಿಸಬಹುದಿತ್ತು. ಇದರ ಜತೆಯಲ್ಲೇ ವಯಸ್ಕರು, ಮಹಿಳೆಯರು, ಮಕ್ಕಳು ಸಹಿತ ಬ್ಯಾಗ್‌ಗಳೊಂದಿಗೆ ಆಗಮಿಸಿದ್ದವರು ವಿಮಾನ ನಿಲ್ದಾಣದಲ್ಲಿ ಕೂಲಿಯಾಳುಗಳಿಲ್ಲದೆ ಒದ್ದಾಡುವ ಸ್ಥಿತಿ. ಹಸಿದ ಹೊಟ್ಟೆಯ ಜತೆಗೆ ಲಗೇಜ್ ಹೊತ್ತೊಯ್ಯಲು ಪ್ರಯಾಣಿಕರು ಚಡಪಡಿಸಿದರು ಎಂಬುದು ವಿಮಾನ ನಿಲ್ದಾಣದಲ್ಲಿದ್ದ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಹಸಿದ ಹೊಟ್ಟೆ ಬಿಸ್ಕೆಟ್ ಪ್ಯಾಕೆಟ್, ನೀರಿಗಾಗಿ ಅಂಗಲಾಚಿದರು!
ಆರೋಗ್ಯ ತಪಾಸಣೆ, ಇಮಿಗ್ರೇಶನ್ ಪ್ರಕ್ರಿಯೆ ಬಳಿಕ ಅವರನ್ನು 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸುವ ನಿಟ್ಟಿನಲ್ಲಿ ಹಾಸ್ಟೆಲ್ ಅಥವಾ ಹೊಟೇಲ್‌ಗಳನ್ನು ಆಯ್ದುಕೊಳ್ಳುವ ಅವಕಾಶ ನೀಡಲಾಯಿತು. ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ಗೆ ಅಗತ್ಯವಾದ ಸಿದ್ಧತೆಗಳು ನಡೆದಿಲ್ಲ ಎಂದ ಅಧಿಕಾರಿಗಳು ಹೊಟೇಲ್‌ಗಳನ್ನೇ ಆಯ್ದುಕೊಳ್ಳುವಂತೆ ಪ್ರಯಾಣಿಕರನ್ನು ಒತ್ತಾಯಿಸಿದರು. ಆದರೆ ಪ್ರಯಾಣಿಕರು ಕನಿಷ್ಠ ದಿನಕ್ಕೆ 1,000 ರೂ.ನಂತೆ 14 ದಿನಗಳಿಗೆ 14,000 ರೂ. ಪಾವತಿಸಬೇಕೆಂಬ ಚಿಂತೆಯಿಂದ ಆಕ್ಷೇಪಿಸಿದರು.
ಗಲ್ಫ್‌ನಿಂದ ಬಂದವರೆಲ್ಲರೂ ಹಣವಂತರು ಎಂಬ ಭ್ರಮೆ ಯಾಕೆ? ಕಾರ್ಮಿಕ ವರ್ಗ, ಕುಟಂಬದವರನ್ನು ನೋಡಲು ಹೋದವರು, ಕೆಲ ತಿಂಗಳ ಹಿಂದೆಯಷ್ಟೇ ಕೆಲಸ ಅರಸಿ ಹೋದವರೂ ಇರುವುದರಿಂದ ಅಷ್ಟೊಂದು ಮೊತ್ತ ಪಾವತಿಸಿ ಹೊಟೇಲ್‌ಗಳಲ್ಲಿ ತಂಗುವುದು ಹೇಗೆ ಎಂಬ ಅಸಮಾಧಾನ ಕೂಡಾ ಪ್ರಯಾಣಿಕರಿಂದ ವ್ಯಕ್ತವಾಯಿತು. ಅದೆಲ್ಲವನ್ನೂ ಸುಧಾರಿಸಿಕೊಂಡು ಅವರಿಗೆ ನಿಗದಿಪಡಿಸಲಾದ ಹೊಟೇಲ್ ರೂಂಗಳತ್ತ ಪ್ರಯಾಣಿಕರನ್ನು ಹೊತ್ತು ಬಸ್ಸುಗಳು ಹೊರಟವು. ಬಸ್ಸೊಂದರಲ್ಲಿ 15ರಿಂದ 20 ಮಂದಿಯಂತೆ ನಗರದ ಸಿಟಿ ಸೆಂಟರ್, ಪಾಂಡೇಶ್ವರ ಬಳಿಯ ಹೊಟೇಲ್‌ಗಳ ಬಳಿ ಪ್ರಯಾಣಿಕರನ್ನು ಇಳಿಸಲಾಯಿತು. ಅದಾಗಲೇ ಬೆಳಗಿನ ಜಾವ ಸುಮಾರು 3ರಿಂದ 3:30 ಗಂಟೆ. ಒಂದೆಡೆ ನಿದ್ದೆಯ ಮಂಪರು, ಕೈಗಳಲ್ಲಿ ಲಗೇಜ್‌ನೊಂದಿಗೆ ಬಸ್ಸಿನಿಂದ ಇಳಿದ ಪ್ರಯಾಣಿಕರು ಹೊಟ್ಟೆ ಹಸಿವಿನಿಂದ ಕಂಗೆಟ್ಟಿದ್ದರು. ಅಲ್ಲಿದ್ದ ಕೆಲ ಸ್ಥಳೀಯರು ಬಿಸ್ಕೆಟ್ ಪ್ಯಾಕೆಟ್ ಹಾಗೂ ನೀರಿನೊಂದಿಗೆ ಇದ್ದಿದ್ದನ್ನು ಕಂಡ ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ಬಿಟ್ಟು ಬಿಸ್ಕೆಟ್, ನೀರಿಗಾಗಿ ಅಂಗಲಾಚುವಂತಹ ಪರಿಸ್ಥಿತಿ. ನಿಂತಲ್ಲೇ ಕೆಲವರು ಬಿಸ್ಕೆಟ್ ಪ್ಯಾಕೇಟ್ ಒಡೆದು ತಿಂದು ನೀರು ಕುಡಿಯುತ್ತಿದ್ದ ದೃಶ್ಯ ಮನ ಕರಗಿಸುವಂತಿತ್ತು. ಅಷ್ಟು ಹೊತ್ತಾದರೂ ಜಿಲ್ಲಾಡಳಿತದಿಂದ ನಿಗದಿಪಡಿಸಲಾದ ಕ್ಯಾಟರಿಂಗ್ ವ್ಯವಸ್ಥೆಯ ಊಟ, ಉಪಹಾರದ ವ್ಯವಸ್ಥೆ ಅವರನ್ನು ತಲುಪಿರಲಿಲ್ಲ ಎನ್ನುವುದು ಸ್ಥಳೀಯ ಪ್ರತ್ಯಕ್ಷದರ್ಶಿಗಳ ಹೇಳಿಕೆ.
ಬಸ್ಸಿನಿಂದ ಇಳಿದ ವಯಸ್ಕರು, ಹೆಂಗಸರು ಮತ್ತೆ ಹೊಟೇಲ್ ರೂಂಗಳಿಗೆ ತಮ್ಮ ಲಗೇಜ್ ಒಯ್ಯಲು ಪರದಾಡಿದರು. ಅಲ್ಲಿದ್ದ ಕೆಲವು ಸ್ಥಳೀಯರು ಅಧಿಕಾರಿಗಳ ಜತೆ ವಿನಂತಿ ಮಾಡಿಕೊಂಡು, ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಬಳಸಿಕೊಂಡು ಕೆಲವರ ಲಗೇಜ್‌ಗಳನ್ನು ರೂಂಗಳಿಗೆ ತಲುಪಿಸುವಲ್ಲಿ ನೆರವಾದರು. ಇಷ್ಟಾದರೂ ಪ್ರಯಾಣಿಕರಿಗೆ ಆಹಾರ ತಲುಪಿಸಬೇಕಾದ ಕ್ಯಾಟರಿಂಗ್‌ನವರು ಬಂದಿರಲಿಲ್ಲ. ಕಾರಣ ಅವರಿಗೆ ಬೆಳಗ್ಗೆ 4:30ಕ್ಕೆ ಆಹಾರ ತಲುಪಿಸುವಂತೆ ತಿಳಿಸಲಾಗಿತ್ತಂತೆ. ಹಾಗಾಗಿ ಉಪವಾಸ ಹಿಡಿದವರು ಸೇರಿದಂತೆ ಪ್ರಯಾಣಿಕರು ಹಸಿವಿನಿಂದ ತತ್ತರಿಸಬೇಕಾದ ಪರಿಸ್ಥಿತಿ. ಬಳಿಕ ಬಂದ ಆಹಾರ ಪೊಟ್ಟಣದಲ್ಲಿ ಇದ್ದಿದ್ದು, ಚಪಾತಿ ಮತ್ತು ಗಸಿ!
ಜಿಲ್ಲಾಡಳಿತ ಯಾವುದಾದರೂ ಸಂಘಟನೆಗಳಿಗೆ ಅಥವಾ ಸ್ಥಳೀಯರಿಗೆ ಮನವಿ ಮಾಡಿದ್ದಲ್ಲಿ ಅವರು ಫಲವಸ್ತುಗಳೊಂದಿಗೆ ಆಹಾರ ವ್ಯವಸ್ಥೆಯನ್ನು ಉಚಿತವಾಗಿಯೇ ಒದಗಿಸುತ್ತಿದ್ದರು. ಮಕ್ಕಳು, ಗರ್ಭಿಣಿಯರು, ವಯಸ್ಕರು ಸೇರಿದಂತೆ ಪ್ರಯಾಣಿಕರು ಬೆಳ್ಳಂಬೆಳಗ್ಗೆಯವರೆಗೂ ಹಸಿವಿನಿಂದ ಕಂಗೆಡುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂಬುದು ಪ್ರತ್ಯಕ್ಷದರ್ಶಿಗಳ ಅನಿಸಿಕೆ.
ಅಸಹಾಯಕ ಅಧಿಕಾರಿಗಳು- ಹೊಟೇಲ್ ಸಿಬ್ಬಂದಿ!
ಈ ನಡುವೆ ಬಸ್ಸಿನಿಂದ ಇಳಿದು ಹೊಟೇಲ್‌ನಲ್ಲಿ ಪ್ರಯಾಣಿಕರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಇದ್ದ ಇಬ್ಬರು ಅಧಿಕಾರಿಗಳು ಪ್ರಯಾಣಿಕರ ಅಸಮಾಧಾನದೆದುರು ಅಸಹಾಯಕರಾಗಿದ್ದರು. ಮಕ್ಕಳ ಕೂಗಾಟ, ವಯಸ್ಕರ ಚಡಪಡಿಸುವಿಕೆಯ ನಡುವೆ ಅಲ್ಲಿದ್ದ ಅಧಿಕಾರಿಗಳು ಮಾತ್ರ ಶಾಂತಚಿತ್ತದಿಂದಲೇ ಎಲ್ಲರನ್ನೂ ಮನವರಿಕೆ ಮಾಡುವ ಪ್ರಯತ್ನ ಪಡುತ್ತಿದ್ದರು. ಅಧಿಕಾರಿಗಳಿಗೆ ಪ್ರಯಾಣಿಕರನ್ನು ನೋಂದಣಿ ಮಾಡಿ ಹೊಟೇಲ್ ತಲುಪಿಸುವ ಜವಾಬ್ದಾರಿಯನ್ನು ಮಾತ್ರ ನೀಡಲಾಗಿತ್ತು. ಈ ನಡುವೆ ಪ್ರಯಾಣಿಕರ ಹಸಿವಿನ ಗೋಳು, ಅವ್ಯವಸ್ಥೆಯ ಕುರಿತಂತೆ ಅಧಿಕಾರಿಗಳು ಕೂಡಾ ನಿರುತ್ತರಾಗಿದ್ದರು.
ಇದೇ ವೇಳೆ ಹೊಟೇಲ್‌ಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಹೊಟೇಲ್ ಸಿಬ್ಬಂದಿ ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದನ್ನು ಬಿಟ್ಟರೆ ಉಳಿದಂತೆ ಯಾವುದೇ ರೀತಿಯ ತರಬೇತಿಯನ್ನು ಅವರಿಗೆ ನೀಡಿದಂತಿರಲಿಲ್ಲ. ಪ್ರಯಾಣಿಕರ ಲಾಂಡ್ರಿ, ಇತರ ಅಗತ್ಯ ವಿಷಯಗಳ ಬಗ್ಗೆ ಮಾಹಿತಿಯೇ ಅವರಲ್ಲಿ ಇರಲಿಲ್ಲ. ಕೆಲ ಪ್ರಯಾಣಿಕರು ಕೂಡಾ ಹಸಿವು ಹಾಗೂ ನಿದ್ದೆಯ ಮಂಪರಿನಲ್ಲಿ ಸ್ಯಾನಿಟೈಸರ್ ಬಳಕೆಯನ್ನೂ ಮರೆತು ರೂಂಗಳತ್ತ ಹೊರಟರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ತವರಿಗೆ ಬರಲು ಆತುರ ಬೇಡ- ಸಂಯಮವಿರಲಿ
ಕೊರೋನ ಸಂಕಷ್ಟವನ್ನು ಇಡೀ ಜಗತ್ತೇ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ವಿದೇಶಗಳಲ್ಲಿ ಇರುವವರಿಗೆ ತಮ್ಮ ತಾಯ್ನಿಡಿಗೆ ಮರಳಲು ಆತುರ ಸಹಜ. ಆದರೆ, ಸಾಮಾನ್ಯ ದಿನಗಳಲ್ಲಿ ವಾಪಾಸಾಗುತ್ತಿದ್ದ ಹಾಗೆ ಆಗಮಿಸುವ ಆತುರ ಬೇಡ. ಕೆಲಸವಿಲ್ಲದೆ ಬೀದಿಪಾಲಾದ ಯುವಕರು, ವಿದ್ಯಾರ್ಥಿಗಳಿಗೆ ಮೊದಲು ತವರಿಗೆ ಮರಳು ಅವಕಾಶ ನೀಡಬೇಕು. ಉಳಿದವರು ಜಿಲ್ಲಾಡಳಿತ, ಸರಕಾರದಿಂದ ಸಾಕಷ್ಟು ವ್ಯವಸ್ಥೆಗಳನ್ನು ಕಲ್ಪಿಸುವವರೆಗೆ ಸಂಯಮ ಕಾಯ್ದುಕೊಂಡು ಮರಳಲು ಸಿದ್ಧತೆ ನಡೆಸುವುದು ಒಳಿತು. ಎಲ್ಲರೂ ಒಮ್ಮೆಗೆ ತಾಯ್ನೆಲ ಸೇರಲು ಮುಂದಾದರೆ ಇಲ್ಲಿ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಆಡಳಿತ ವ್ಯವಸ್ಥೆಗೂ ತೊಂದರೆಯಾಗಲಿದೆ ಎಂಬ ಮನವರಿಕೆ ಮಾಡಿಕೊಂಡರೆ ಉತ್ತಮ ಎಂದು ಒಬ್ಬ ಪ್ರತ್ಯಕ್ಷದರ್ಶಿ 'ವಾರ್ತಾಭಾರತಿ'ಗೆ ತಿಳಿಸಿದರು.
ಇಷ್ಟರವರೆಗೆ ಕಾಯ್ದುಕೊಂಡ ಸಂಯಮದ ಜತೆಗೆ ನಿಯಮಗಳನ್ನೂ ಪಾಲಿಸಬೇಕಿದೆ. ವಿಮಾನದಲ್ಲಿ ಬರುವಾಗ 30 ಕೆ.ಜಿ. ಲಗೇಜ್ ಹೊತ್ತೊಯ್ಯಬಹುದೆಂಬ ಕಾರಣಕ್ಕೆ ಅನಗತ್ಯ ಸಾಮಾನು, ಸರಂಜಾಮುಗಳನ್ನು ಪ್ರಯಾಣಿಕರು ತರುವ ಗೋಜಿಗೆ ಹೋಗದಿರುವುದು ಉತ್ತಮ. ಅದನ್ನು ಮತ್ತೆಯೂ ತರಿಸಿಕೊಳ್ಳಬಹುದು. ಈಗ ನಮ್ಮ ಆರೋಗ್ಯದ ಜತೆಗೆ ಇತರರ ಆರೋಗ್ಯವನ್ನು ನಾವು ಕಾಯ್ದುಕೊಳ್ಳಬೇಕಾಗಿದೆ. ವ್ಯವಸ್ಥೆಯ ಜತೆಗೆ ನಾವು ಹೊಂದಿಕೊಳ್ಳಬೇಕಿದೆ. ಸರಕಾರ, ಜಿಲ್ಲಾಡಳಿತಕ್ಕೆ ನಮ್ಮಿಂದಾಗುವ ಸಹಕಾರ ನೀಡಬೇಕಿದೆ. ಈ ನಡುವೆ, ಜಿಲ್ಲಾಡಳಿತ, ಸಂಬಂಧಪಟ್ಟ ಹೊಟೇಲ್, ಹಾಸ್ಟೆಲ್‌ಗಳಲ್ಲೂ ಸಮರ್ಪಕ ವ್ಯವಸ್ಥೆಯನ್ನು ಮುಂಚಿತವಾಗಿ ಮಾಡಬೇಕಿದೆ. ಪ್ರಯಾಣಿಕರ ಮನಸ್ಥಿತಿಯನ್ನು ಅರಿತುಕೊಂಡು ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಇದಕ್ಕಾಗಿ ಸಂಘಸಂಸ್ಥೆಗಳ ನೆರವನ್ನು ಪಡೆಯುವಲ್ಲಿಯೂ ಜಿಲ್ಲಾಡಳಿತ ಹಿಂದೇಟು ಹಾಕಬಾರದು. ಗಲ್ಫ್ ರಾಷ್ಟ್ರಗಳಿಂದ ಬರುವವರೆಲ್ಲರೂ ಹಣವಂತರಲ್ಲ ಎಂಬ ವಾಸ್ತವವನ್ನು ಜಿಲ್ಲಾಡಳಿತ ಅರ್ಥ ಮಾಡಿಕೊಂಡು ಅವರಿಗೆ ಸರಕಾರದ ವತಿಯಿಂದ ನೀಡಲು ಸಾಧ್ಯವಾದ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿಬರುತ್ತಿದೆ.