ದುಬೈಯಿಂದ ಆಗಮಿಸಿದ 52 ಮಂದಿ ಉಡುಪಿಯ ಅನಿವಾಸಿ ಕನ್ನಡಿಗರು

Update: 2020-05-13 08:20 GMT

ಉಡುಪಿ, ಮೇ 13: ದುಬೈಯಿಂದ ಮೊದಲ ವಿಮಾನದಲ್ಲಿ ಮಂಗಳವಾರ ರಾತ್ರಿ ಮಂಗಳೂರು ತಲುಪಿದ 176 ಅನಿವಾಸಿ ಕನ್ನಡಿಗರ ಪೈಕಿ ಉಡುಪಿ ಜಿಲ್ಲೆಗೆ ಸೇರಿರುವ 52 ಮಂದಿ ಇಂದು ಬೆಳಗಿನ ಜಾವ ಉಡುಪಿ ತಲುಪಿದ್ದರು. ಇವರೆಲ್ಲರನ್ನು ಹೊಟೇಲ್ ಹಾಗೂ ಸರಕಾರಿ ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದೆ.

ಉಡುಪಿ ತಾಲೂಕಿನ 11, ಕುಂದಾಪುರ- 11, ಬ್ರಹ್ಮಾವರ- 3, ಕಾಪು- 16, ಬೈಂದೂರು- 8, ಕಾರ್ಕಳ- 3 ಮಂದಿ ಆಗಮಿಸಿದ್ದು, ಇವರಲ್ಲಿ ಐದು ಮಂದಿಯನ್ನು ಸರಕಾರಿ ಕ್ವಾರಂಟೇನ್‌ನಲ್ಲಿ ಮತ್ತು 47 ಮಂದಿಯನ್ನು ನಗರದ ಖಾಸಗಿ ಹೊಟೇಲಿನಲ್ಲಿ ಕ್ವಾರಂಟೇನ್‌ನಲ್ಲಿ ಇರಿಸಲಾಗಿದೆ. ಈ ತಂಡದಲ್ಲಿ ಎಂಟು ಮಂದಿ ಗರ್ಭಿಣಿಯರ ಸಹಿತ ಮಹಿಳೆಯರು ಮತ್ತು ಮಕ್ಕಳು ಇದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅವ್ಯವಸ್ಥೆ, ನಿರ್ಲಕ್ಷ್ಯದ ಆರೋಪ
‘ನಾವು ಮೇ 12ರಂದು ರಾತ್ರಿ 10:10ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿದೆವು. ಅಲ್ಲಿ ನಮ್ಮನ್ನು ಒಂದೂವರೆ ಗಂಟೆ ಕಾಯಿಸಿದರು. ನಮ್ಮ ಲಗೇಜ್ ಗಳನ್ನು ನಾವೇ ಹೊರಬೇಕಾಗಿತ್ತು. ಇದರಿಂದ ಗರ್ಭಿಣಿಯರು ತುಂಬಾ ತೊಂದರೆ ಅನುಭವಿಸಿದರು. ಬಳಿಕ ಅವರಿಗೆಲ್ಲ ನಾನೇ ಸಹಾಯ ಮಾಡಿದೆ. ಅಲ್ಲಿ ನಮ್ಮ ಆರೋಗ್ಯ ತಪಾಸಣೆ ಮಾಡಿದರು. ಅಲ್ಲಿಂದ ನಾವು ನಸುಕಿನ ವೇಳೆ ಒಂದೂವರೆ ಗಂಟೆಗೆ ಬಸ್‌ನಲ್ಲಿ ಹೊರಟೆವು’ ಎಂದು ಉಡುಪಿ ಖಾಸಗಿ ಹೊಟೇಲಿನಲ್ಲಿ ಕ್ವಾರಂಟೇನ್‌ನಲ್ಲಿರುವ ಅನಿವಾಸಿ ಕನ್ನಡಿಗರೊಬ್ಬರು ದೂರವಾಣಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಹೆಜಮಾಡಿ ಗಡಿಯಲ್ಲಿ ಸುಮಾರು ಅರ್ಧ ಗಂಟೆ ಬಸ್ ನಿಂತಿತ್ತು. ನಂತರ ನಮ್ಮನ್ನು ನೇರ ಉಡುಪಿ ಬೋರ್ಡ್ ಹೈಸ್ಕೂಲ್‌ಗೆ ಕರೆದುಕೊಂಡು ಬಂದರು. ಅಲ್ಲಿಗೆ ಬರುವಾಗ ಬೆಳಗಿನ ಜಾವ ನಾಲ್ಕೂವರೆ ಗಂಟೆಯಾಗಿತ್ತು. ಸರಕಾರಿ ಕ್ವಾರಂಟೈನ್‌ನಲ್ಲಿ ಉಳಿದುಕೊಳ್ಳುವುದಾದರೆ ಊಟ, ತಿಂಡಿ ವ್ಯವಸ್ಥೆ ಮಾಡುತ್ತೇವೆ, ಅಲ್ಲಿ ಶುಚಿತ್ವ ಸೇರಿದಂತೆ ಇತರ ಸಮಸ್ಯೆಗಳಾದರೆ ನಂತರ ಸ್ಥಳ ಬದಲಾಯಿಸಲು ಅವಕಾಶ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಅಲ್ಲದೆ ಅವರೇ ಖಾಸಗಿ ಹೊಟೇಲ್‌ನಲ್ಲಿ ಉಳಿದುಕೊಳ್ಳಲು ಸಲಹೆ ನೀಡಿದರು. ಆದುದರಿಂದ ಹೆಚ್ಚಿನವರು ಖಾಸಗಿ ಹೊಟೇಲಿನಲ್ಲೇ ಉಳಿದುಕೊಳ್ಳಲು ನಿಶ್ಚಯಿಸಿದರು.’

‘ಈ ಮಧ್ಯೆ ನಮಗೆ ಕುಡಿಯುವ ನೀರು ಕೊಡುವವರು ಕೂಡ ಇರಲಿಲ್ಲ. ಈ ಸೆಕೆಯ ವಾತಾರವಣದಲ್ಲಿ ಗರ್ಭಿಣಿಯರು, ವೃದ್ಧರು, ಮಕ್ಕಳು ಸೇರಿದಂತೆ ಎಲ್ಲರು ತುಂಬಾ ತೊಂದರೆ ಅನುಭವಿಸಬೇಕಾಯಿತು. ಎಲ್ಲರೂ ನಮ್ಮನ್ನು ನಿರ್ಲಕ್ಷಿಸಿದರು. ಬೆಳಗ್ಗೆವರೆಗೆ ನಾವು ಯಾರು ಕೂಡ ಊಟ ಮಾಡಲೇ ಇಲ್ಲ. ಈಗ ನಾವೆಲ್ಲ ದುಬಾರಿ ಹಣ ತೆತ್ತು 14 ದಿನಗಳ ಕಾಲ ಹೊಟೇಲಿನಲ್ಲಿ ಉಳಿಯಬೇಕಾಗಿದೆ. ಕೆಲವರು ಹಣ ಇಲ್ಲ ಹೇಳಿ ಸರಕಾರಿ ಕ್ವಾರಂಟೇನ್ ನಲ್ಲಿ ಉಳಿದುಕೊಂಡಿದ್ದಾರೆ’ ಎಂದು ಅವರು ಅಳಲು ತೋಡಿಕೊಂಡರು.

‘ನಮ್ಮ ಊರಿನಲ್ಲಿ ನಮ್ಮನ್ನು ಈ ರೀತಿ ನಡೆಸಿಕೊಂಡಿರುವುದರಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಇದಕ್ಕಿಂತ ಅಲ್ಲಿಯೇ ಉಳಿದುಕೊಂಡಿದ್ದರೆ ಚೆನ್ನಾಗಿತ್ತು ಎಂದು ಅನಿಸಿತು. ವಿದೇಶದಿಂದ ಇನ್ನು ಊರಿಗೆ ಬರುವವರು ತುಂಬಾ ಆಲೋಚನೆ ಮಾಡಿ ಕೊಂಡು ಬರುವುದು ಒಳಿತು’ ಎಂದು ಅವರು ದುಃಖದಿಂದ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News