ಮಂಗಳೂರು: ವಾಟ್ಸ್‌ಆ್ಯಪ್ ಗ್ರೂಪ್ ಅಡ್ಮಿನ್ ಓರ್ವನ ಬಂಧನ

Update: 2020-05-13 09:00 GMT

 ಮಂಗಳೂರು, ಮೇ 13: ಪ್ರಭಾವಿ ವ್ಯಕ್ತಿಗಳ ಹೆಸರು ಹೇಳಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿ ವಾಟ್ಸ್‌ಆ್ಯಪ್ ಗ್ರೂಪ್ ವೊಂದರ ಅಡ್ಮಿನ್ ಅನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

'ಕನಕ' ಎಂಬ ವಾಟ್ಸ್‌ಆ್ಯಪ್ ಗ್ರೂಪ್ ನ ಅಡ್ಮಿನ್ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕುಂಡಡ್ಕ ನಿವಾಸಿ ಅಬ್ದುಲ್ ರಶೀದ್ ಕುಂಡಡ್ಕ ಬಂಧಿತ ಆರೋಪಿ. ಈತ ಪೊಲೀಸ್ ಅಧಿಕಾರಿಗಳು, ಮಾಧ್ಯಮದವರ ಹಾಗೂ ರಾಜಕೀಯ ವ್ಯಕ್ತಿಗಳ ಹೆಸರನ್ನು ಹೇಳಿ ದುರುಪಯೋಗಪಡಿಸಿಕೊಂಡು ವಸೂಲಿ ಮಾಡುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.

ಆರೋಪಿ ರಶೀದ್, ಕುಖ್ಯಾತ ರೌಡಿ ಹಾಗೂ ಜ್ಯುವೆಲ್ಲರಿ ದರೋಡೆ ಪ್ರಕರಣವೊಂದರ ಪ್ರಮುಖ ಆರೋಪಿ ಮುತ್ತಾಸಿಮ್ ತಸ್ಲೀಂ ಎಂಬಾತನ ಕೊಲೆ ಪ್ರಕರಣದಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬನ ಹೆಸರನ್ನು ಪ್ರಕರಣದಿಂದ ತೆಗೆಸುತ್ತೇನೆ, ತನಗೆ ಪೊಲೀಸ್ ಅಧಿಕಾರಿಗಳ ಪರಿಚಯವಿದೆ ಎಂದು ಹೇಳಿ 20 ಲಕ್ಷ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದನು. ಅಲ್ಲದೇ 4 ಲಕ್ಷ ರೂ. ಸುಲಿಗೆ ಪಡೆದಿರುವುದಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ರಶೀದ್‌ನನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ‘ಕನಕ’ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ನ ಅಡ್ಮಿನ್ ಆಗಿದ್ದು, ಈ ಗ್ರೂಪ್ ನಲ್ಲಿ ಸರಕಾರಿ ಅಧಿಕಾರಿಗಳನ್ನು, ರಾಜಕೀಯ ವ್ಯಕ್ತಿ, ಮಾಧ್ಯಮದವರನ್ನು ಸೇರಿಸಿಕೊಂಡಿದ್ದಾನೆ. ನಂತರ ತನ್ನ ವಾಟ್ಸ್‌ಆ್ಯಪ್ ಗ್ರೂಪ್ ಹೆಸರು ನಮೂದಿಸಿ ಕರೆ ಮಾಡಿ ತನ್ನ ಪರಿಚಯ ಮಾಡಿಕೊಂಡು, ಆ ಪರಿಚಯವನ್ನು ದುರುಪಯೋಗಪಡಿಸಿಕೊಂಡು ಹಣ ಸುಲಿಗೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಅಬ್ದುಲ್ ರಶೀದ್ ವಿರುದ್ದ ಈ ಹಿಂದೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುತ್ತದೆ. ಅಲ್ಲದೇ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಕೂಡಾ ಇರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕ್, ಪಿಎಸ್ಸೈ ಎಚ್.ಡಿ. ಕಬ್ಬಾಳ್ ರಾಜ್ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News