ದ.ಕ. ಜಿಲ್ಲೆಯಲ್ಲಿ ಕೊರೋನಗೆ 4ನೇ ಬಲಿ

Update: 2020-05-13 09:45 GMT

ಮಂಗಳೂರು, ಮೇ 13: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ವೈರಸ್ ಸೋಂಕಿಗೆ ಮತ್ತೋರ್ವ ಮಹಿಳೆ ಬಲಿಯಾಗಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಳೂರು ಹಿಂದೂ ರುದ್ರಭೂಮಿ ಸಮೀಪದ ನಿವಾಸಿ, 58 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ನಗರದ ಕೋವಿಡ್ ಆಸ್ಪತ್ರೆಯಲ್ಲಿಂದು ಮಧ್ಯಾಹ್ನ 12.45ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್ ತಿಳಿಸಿದ್ದಾರೆ. ಇದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಸೋಂಕಿನಿಂದ ಮೃತಪಟ್ಟ ಮೊದಲ ಪ್ರಕರಣವಾಗಿದೆ.

ಈ ಮಹಿಳೆಗೆ ಕೊರೋನ ಸೋಂಕು ತಗುಲಿರುವುದು ಎಪ್ರಿಲ್ 30ರಂದು ದೃಢಪಟ್ಟಿತ್ತು.

ಮೆದುಳು ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ 58 ವರ್ಷದ ಈ ಮಹಿಳೆ ಮಂಗಳೂರು ಹೊರವಲಯದ ಪಡೀಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆ ಆಸ್ಪತ್ರೆಯ ಆಯಾ ಆಗಿರುವ ಬಂಟ್ವಾಳ ತಾಲೂಕಿನ ಸಿಬ್ಬಂದಿಯೊಬ್ಬರು ಮಹಿಳೆಯನ್ನು ಉಪಚರಿಸುತ್ತಿದ್ದರು. ಈ ನಡುವೆ ಆಯಾಗೆ ಕೊರೋನ ಸೋಂಕು ತಗುಲಿತ್ತು.

ಪಡೀಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ 58 ವರ್ಷದ ಈ ಮಹಿಳೆಯಲ್ಲಿ ವಾರದ ಬಳಿಕ ಜ್ವರದ ಲಕ್ಷಣಗಳು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಎಪ್ರಿಲ್ 28ರಂದು ಮಂಗಳೂರಿನ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಿದ್ದು, ಎಪ್ರಿಲ್ 30ರಂದು ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಇದರೊಂದಿಗೆ ಕೊರೋನ ಸೋಂಕಿಗೆ ಜಿಲ್ಲೆಯಲ್ಲಿ ನಾಲ್ವರು ಬಲಿಯಾದಂತಾಗಿದೆ. ಈ ಹಿಂದೆ ಬಂಟ್ವಾಳದ ಮೂವರು ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಜಿಲ್ಲೆಯಲ್ಲಿ ಈ ಸೋಂಕಿನಿಂದ ಮೃತಪಟ್ಟ ಎಲ್ಲರೂ ಮಹಿಳೆಯರೇ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News