ಗುಜರಾತ್ ಸಿಎಂ ಬದಲಾವಣೆ ಸಾಧ್ಯತೆ ಸುದ್ದಿ ಪ್ರಕಟಿಸಿದ ಸಂಪಾದಕರ ವಿರುದ್ಧ ದೇಶದ್ರೋಹ ಪ್ರಕರಣ

Update: 2020-05-13 09:46 GMT
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ

ಅಹ್ಮದಾಬಾದ್: ಗುಜರಾತ್ ಸರಕಾರ ಕೋವಿಡ್-19 ಬಿಕ್ಕಟ್ಟನ್ನು ನಿಭಾಯಿಸಿದ ರೀತಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ  ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಾಧ್ಯತೆಯಿದೆಯೆಂಬ ಸುದ್ದಿ ಪ್ರಕಟಿಸಿದ್ದಕ್ಕಾಗಿ ಗುಜರಾತಿ ಸುದ್ದಿ ತಾಣ 'ಫೇಸ್ ಆಫ್ ನೇಷನ್' ಸಂಪಾದಕ ಧವಳ್ ಪಟೇಲ್ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಸೋಮವಾರ ಅವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಮೇ 7ರಂದು ಈ ನಿರ್ದಿಷ್ಟ ಸುದ್ದಿ ಪ್ರಕಟಗೊಂಡಿತ್ತಲ್ಲದೆ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಸ್ಥಾನಕ್ಕೆ ಕೇಂದ್ರ ಸಚಿವ ಮನ್ಸುಖ್ ಮಂಡವಿಯಾ ಅವರ ನೇಮಕ ಸಾಧ್ಯತೆ ಬಗ್ಗೆ ವರದಿಯಲ್ಲಿ ಹೇಳಲಾಗಿತ್ತು. ಕಳೆದ ಕೆಲ ದಿನಗಳಿಂಂದ ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ  ಸಮಸ್ಯೆ ನಿಭಾಯಿಸಿದ ರೀತಿಯಿಂದ ಬಿಜೆಪಿ ನಾಯಕತ್ವ ಅಸಂತುಷ್ಟವಾಗಿದೆ ಎಂದೂ ವರದಿ ತಿಳಿಸಿತ್ತು. ಆದರೆ ಸಚಿವರು ನಂತರ ಈ ಸುದ್ದಿಯನ್ನು ನಿರಾಕರಿಸಿದ್ದರು.

ಅಹ್ಮದಾಬಾದ್ ಕ್ರೈಂ ಬ್ರ್ಯಾಂಚ್ ಪೊಲೀಸರು  ಕಳೆದ ಶುಕ್ರವಾರ ಪಟೇಲ್ ವಿರುದ್ಧ ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್ 124(ಎ) ಹಾಗೂ ವಿಪತ್ತು ನಿರ್ವಹಣಾ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಪಟೇಲ್ ಅವರನ್ನು ಅವರ ಅಹ್ಮದಾಬಾದ್ ನಿವಾಸದಿಂದ ಸೋಮವಾರ ವಶಕ್ಕೆ ಪಡೆದುಕೊಳ್ಳಲಾಗಿದೆ.

"ವೆಬ್ ತಾಣದಲ್ಲಿನ ಸುದ್ದಿಯ ಮೂಲಕ ಸಮಾಜದಲ್ಲಿ ಹಾಗೂ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಯತ್ನ ನಡೆಸಲಾಗಿದೆ. ಪ್ರಾಥಮಿಕ ತನಿಖೆ ನಂತರ ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ,'' ಎಂದು ಅಹ್ಮದಾಬಾದ್ ಕ್ರೈಂ ಬ್ರ್ಯಾಂಚ್‍ನ ಎಸಿಪಿ ಬಿ ವಿ ಗೋಹಿಲ್ ಹೇಳಿದ್ದಾರೆ.

ಈ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News