ಕಾರ್ಮಿಕ ಇಲಾಖೆ ನೀಡಿದ ಅಕ್ಕಿ ಚೀಲದಲ್ಲಿ ಕೊಳೆತ ಅಕ್ಕಿ!
ಮಂಗಳೂರು, ಮೇ 13: ಲಾಕ್‌ಡೌನಿಂದಾಗಿ ಸಂಕಷ್ಟದಲ್ಲಿದ್ದು, ತಮ್ಮ ಊರುಗಳಿಗೆ ತೆರಳಲು ಹಣವೂ ಇಲ್ಲದೆ ಒದ್ದಾಡುತ್ತಿರುವ ಸಾವಿರಾರು ಕಾರ್ಮಿಕರು ಜೋಕಟ್ಟೆಯಲ್ಲಿ ಪರಿಸರದಲ್ಲಿ ಅತಂತ್ರರಾಗಿದ್ದಾರೆ. ಈ ನಡುವೆ, ಅವರಿಗೆ ಜಿಲ್ಲಾಡಳಿತದ ಭಾಗವಾಗಿ ಕೆಲ ದಿನಗಳ ಹಿಂದೆ ಕಾರ್ಮಿಕ ಇಲಾಖೆ ಪೂರೈಕೆ ಮಾಡಿದ ಅಕ್ಕಿ ಕೂಡಾ ಕಳಪೆ ಮಟ್ಟದ್ದಾಗಿದ್ದು, ಕೊಳೆತು ಹೋಗಿರುವ ಆರೋಪ ವ್ಯಕ್ತವಾಗಿದೆ.
ಉತ್ತರ ಪ್ರದೇಶ, ಬಿಹಾರದ ವಲಸೆ ಕಾರ್ಮಿಕರು ಊರಿಗೆ ತೆರಳುವ ನಿಟ್ಟಿನಲ್ಲಿ ನಗರದ ಜೋಕಟ್ಟೆ ಪ್ರದೇಶದಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿಂದ ರೈಲಿನ ಮೂಲಕ ತೆರಳಬಹುದು ಎಂಬ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದ್ದಾರೆ. ಜೋಕಟ್ಟೆ ವ್ಯಾಪ್ತಿಯ ಎಂಆರ್‌ಪಿಎಲ್, ಎಸ್‌ಇಝೆಡ್ ಸುತ್ತಮುತ್ತಲ ಪರಿಸರದಲ್ಲಿ ಅಲಲ್ಲಿ ತಂಗಿರುವ ಈ ಕಾರ್ಮಿಕರಿಗೆ ಗುತ್ತಿಗೆದಾರರಾಗಲಿ, ಇವರನ್ನು ದುಡಿಸಿಕೊಂಡಿರುವ ಕಂಪನಿಗಳಾಗಲಿ ಲಾಕ್‌ಡೌನ್ ಸಂದರ್ಭದಲ್ಲಿಯೂ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಅವರನ್ನು ಊರಿಗೆ ಕಳುಹಿಸುವ ವ್ಯವಸ್ಥೆಯನ್ನೂ ಮಾಡಿಲ್ಲ. ಈ ನಡುವೆ ಕೆಲ ದಿನಗಳ ಹಿಂದೆ ಈ ಕಾರ್ಮಿಕರು ಕಂಪನಿ ಎದುರು ಊರಿಗೆ ಹೋಗುವುದಾಗಿ ಪ್ರತಿಭಟಿಸಿದಾಗ ಅವರಿಗೆ ರೈಲು ವ್ಯವಸ್ಥೆ ಮಾಡುವ ಭರವಸೆ ನೀಡಲಾಗಿತ್ತು. ಇದೇ ವೇಳೆ ಜಿಲ್ಲಾಡಳಿತದ ಭಾಗವಾಗಿ ಕಾರ್ಮಿಕ ಇಲಾಖೆ ಈ ಕಾರ್ಮಿಕರಿಗೆ ತಲಾ 10 ಕೆಜಿಯ 100 ಚೀಲ ಅಕ್ಕಿಯನ್ನು ಪೂರೈಸಿತ್ತು. ಸ್ಥಳೀಯ ಪಂಚಾಯತ್ ಮುಖಂಡರು ಈ ಅಕ್ಕಿ ಚೀಲವನ್ನು ಕಾರ್ಮಿಕರಿಗೆ ತಲುಪಿಸಿದ್ದರು. ಆದರೆ ತಲುಪಿಸಿದ ಬಳಿಕ ಆ ಚೀಲದಲ್ಲಿದ್ದ ಅಕ್ಕಿ ಕಳಪೆ, ಕೊಳೆತು ಹುಳು ಹಿಡಿದಿರುವುದು ಗೊತ್ತಾಗಿದೆ. ಹಾಗಾಗಿ ಪ್ರಸ್ತುತ ಪಂಚಾಯತ್ ಸದಸ್ಯರು ಹಾಗೂ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಮುಖಂಡರೂ ಆಗಿರುವ ಅಬೂಬಕ್ಕರ್ ನೇತೃತ್ವದಲ್ಲಿ ಈ ಕಾರ್ಮಿಕರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಕಾರ್ಮಿಕರು ತಮ್ಮ ಊರುಗಳಿಗೆ ಹಿಂತಿರುಗಲು ಹಾತೊರೆಯುತ್ತಿದ್ದಾರೆ. ಕೈಯ್ಯಲ್ಲಿ ದುಡ್ಡಿಲ್ಲದೆ ಊರಿಗೂ ತೆರಳಲಾಗದೆ, ಇಲ್ಲಿಯೂ ಇರಲು ವ್ಯವಸ್ಥೆಯಿಲ್ಲದೆ ಹತಾಶರಾಗಿದ್ದಾರೆ.
‘‘ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ನಾವೆಲ್ಲಾ ತೊಂದರೆಗೊಳಗಾಗಿದ್ದೇವೆ. ಉತ್ತರ ಪ್ರದೇಶ, ಬಿಹಾರದ ಜನತೆ ಊರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಊರಿಗೆ ತೆರಳಲು ಮಾತ್ರವಲ್ಲ ಊಟ ತಿಂಡಿಗೂ ಹಣವಿಲ್ಲ. ಊರಿಗೆ ಹೋಗಲು ಬಯಸಿರುವ ನಮ್ಮನ್ನು ಅಲ್ಲಿಂದ ಇಲ್ಲಿಗೆ ಅಲೆದಾಡಿಸಲಾಗುತ್ತಿದೆ. ಈ ಅಲೆದಾಟದಲ್ಲೇ ನಮ್ಮಲ್ಲಿ ಇದ್ದ ಚಿಲ್ಲರೆ ಹಣವೂ ಖರ್ಚಾಗಿದೆ. ಈ ನಡುವೆ ಜಿಲ್ಲಾಡಳಿತದ ವತಿಯಿಂದ ನೀಡಲಾದ ಅಕ್ಕಿ ವಾಸನೆಯಿಂದ ಕೂಡಿದ್ದು ಉಪಯೋಗಿಸುವಂತಿಲ್ಲ’’ ಎಂದು ಉತ್ತರ ಪ್ರದೇಶದ ಗೋರಕ್‌ಪುರದ ಲಕ್ಷ್ಮಣ ಸಹಾನಿ ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಹಾರ ಸಾಮಗ್ರಿ ವಿತರಣೆಯಲ್ಲಿ ಭ್ರಷ್ಟಾಚಾರ- ತನಿಖೆಯಾಗಲಿ
‘‘ಜೋಕಟ್ಟೆ ಪರಿಸರದಲ್ಲಿ ಸುಮಾರು ನಾಲ್ಕು ಸಾವಿರದಷ್ಟು ಉತ್ತರ ಭಾರತದ ವಲಸೆ ಕಾರ್ಮಿಕರಿದ್ದಾರೆ. ಅವರಿಗೆ ಗುತ್ತಿಗೆದಾರರು, ಕಂಪನಿಗಳು ಯಾವುದೇ ರೀತಿಯ ಮೂಲಭೂತ ಸೌಕರ್ಯ ಒದಗಿಸಿಲ್ಲ. ಕನಿಷ್ಠ ಊಟೋಪಚಾರದ ವ್ಯವಸ್ಥೆಯನ್ನೂ ಮಾಡಿಲ್ಲ. ಕೆಲ ದಿನಗಳ ಹಿಂದೆ ಸಾವಿರಾರು ಕಾರ್ಮಿಕರು ಪ್ರತಿಭಟನೆ ನಡೆಸಿದಾಗ ಅವರಿಗೆ ರೈಲಿನ ವ್ಯವಸ್ಥೆ ಮಾಡುವ ಭರವಸೆ ನೀಡಲಾಗಿತ್ತಾದರೂ ವ್ಯವಸ್ಥೆ ಆಗಿಲ್ಲ. ಈ ನಡುವೆ ಅವರಿಗೆ ಕಾರ್ಮಿಕ ಇಲಾಖೆಯಿಂದ ಪೂರೈಕೆ ಮಾಡಲಾದ ಅಕ್ಕಿ ಇಲಿ ಹೆಗ್ಗಣಗಳೂ ಮುಟ್ಟಲು ಸಾಧ್ಯವಿಲ್ಲದಂತಿದೆ. ಜನರ ಜೀವದ ಜತೆಗೆ ಅದರಲ್ಲೂ ವಲಸೆ ಕಾರ್ಮಿಕರನ್ನು ಅತ್ಯಂತ ನಿಕೃಷ್ಟವಾಗಿ ನೋಡುತ್ತಿರುವುದು ಖಂಡನೀಯ. ಆಹಾರ ವಿತರಣೆಯಲ್ಲಿ ಭಾರೀ ಭ್ರಷ್ಟಾಚಾರವಾಗಿದೆ. ಕೊಳೆತ ಅಕ್ಕಿಗೂ ಬಿಲ್ ಮಾಡಲಾಗುತ್ತಿದೆ. ಈ ಬಗ್ಗೆ ತನಿಖೆಯಾಗಬೇಕು. ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ’’ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಲಸೆ ಕಾರ್ಮಿಕರಿಗೆ ವಿಷಾಹಾರ!
‘‘ವಲಸೆ ಕಾರ್ಮಿಕರ ಸ್ಥಿತಿ ನೋಡುವಾಗ ದು:ಖವಾಗುತ್ತಿದೆ. ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗದ ಪರಿಸ್ಥಿತಿ ನಮ್ಮ ಆಡಳಿತದ್ದು. ಅಕ್ಕಿಯ ರೂಪದಲ್ಲಿ ಕಾರ್ಮಿಕರಿಗೆ ವಿಷಾಹಾರ ನೀಡಲಾಗಿದೆ. ಈ ಬಗ್ಗೆ ಅಧಿಕಾರಿಗಳೂ ಗಮನ ಹರಿಸಿಲ್ಲ’’ ಎಂದು ಸ್ಥಳೀಯ ಪಂಚಾಯತ್ ಸದಸ್ಯ ಅಬೂಬಕ್ಕರ್ ಆಕ್ಷೇಪಿಸಿದ್ದಾರೆ.