ಪತ್ರ ಬರೆದಿರುವುದು ನಿರ್ಧಾರಕ ಒಪ್ಪಂದ ; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅನುಮತಿಗೆ
ಉಡುಪಿ, ಮೇ 13: ಕೊಲ್ಲಿ ರಾಷ್ಟ್ರದ ಅನಿವಾಸಿ ಭಾರತೀಯ ಮಿಲಿಯಾಧಿಪತಿ ಬಿ.ಆರ್.ಶೆಟ್ಟಿ ನೇತೃತ್ವದ ಬಿಆರ್‌ಎಸ್ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆ ಉಡುಪಿಯಲ್ಲಿ ನಡೆಸುತ್ತಿರುವ ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾರ್ಯಾರಂಭಗೊಂಡು ಎರಡು ವರ್ಷಗಳು ಪೂರ್ಣಗೊಂಡರೂ, ರಾಜ್ಯ ಸರಕಾರ ಇನ್ನೂ ಸಂಸ್ಥೆಯೊಂದಿಗೆ ನಿರ್ಧಾರಕ ಒಪ್ಪಂದಕ್ಕೆ (ಡೆಫಿನೆಟಿವ್ ಅಗ್ರೀಮೆಂಟ್) ಸಹಿ ಹಾಕಲು ವಿಫಲವಾಗಿದೆ, ಅಲ್ಲದೇ ಪಕ್ಕದಲ್ಲೇ ನಾವು ನಿರ್ಮಿಸುತ್ತಿರುವ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪರವಾನಿಗೆಯನ್ನೂ ನೀಡಿಲ್ಲ ಎಂದು ಬಿಆರ್‌ಎಸ್ ಸಂಸ್ಥೆ ಪತ್ರಿಕೆಗಳಿಗೆ ಬಿಡುಗಡೆ ಗೊಳಿಸಿರುವ ಸ್ಪಷ್ಟೀಕರಣದಲ್ಲಿ ತಿಳಿಸಿದೆ.
ಬಿ.ಆರ್ ಶೆಟ್ಟಿ ಅವರ ಉದ್ದಿಮೆಗಳು ಇತ್ತೀಚೆಗೆ ಕೊಲ್ಲಿ ರಾಷ್ಟ್ರದಲ್ಲಿ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇದರಿಂದ ಭಾರತದಲ್ಲಿ ಸಂಸ್ಥೆ ನಡೆಸುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿವೆ. ಇದರಲ್ಲಿ ಬಿ.ಆರ್.ಶೆಟ್ಟಿ ಅವರ ಬಿಆರ್ ಲೈಫ್ ನಡೆಸುತ್ತಿರುವ ಉಡುಪಿಯ ತಾಯಿ-ಮಕ್ಕಳ ಆಸ್ಪತ್ರೆಯನ್ನು ನಡೆಸಲು ಕಷ್ಟವಾಗಿ ರಾಜ್ಯ ಸರಕಾರಕ್ಕೆ ಬಿಟ್ಟುಕೊಡಲು ಸಿದ್ಧವೆಂದು ಪತ್ರ ಬರೆದು ತಿಳಿಸಿದೆ ಎಂದು ಇತ್ತೀಚೆಗೆ ಪತ್ರಿಕೆಗಳು ವಿವರವಾಗಿ ವರದಿಗಳನ್ನು ಪ್ರಕಟಿಸಿವೆ.
ಈ ಹಿನ್ನೆಲೆಯಲ್ಲಿ ಇಂದು ಪತ್ರಿಕೆಗಳಿಗೆ ಸ್ಪಷ್ಟೀಕರಣದ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಸಂಸ್ಥೆ, ನಾವು ಎರಡು ವರ್ಷಗಳಿಂದ ನಿರ್ಧಾರಕ ಒಪ್ಪಂದಕ್ಕೆ ಸಹಿ ಹಾಕುವಂತೆ ಪದೇ ಪದೇ ಸರಕಾರಕ್ಕೆ ನೆನಪಿಸಿದರೂ, ಸರಕಾರ ಈವರೆಗೆ ಸಹಿ ಹಾಕಲು ವಿಫಲವಾಗಿದೆ.
ಇದರೊಂದಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುವ ಎಲ್ಲರಿಗೂ ನೀಡುತ್ತಿರುವ ಉಚಿತ ಚಿಕಿತ್ಸೆಗೆ ಅನುಕೂಲವಾಗುವಂತೆ ಪಕ್ಕದಲ್ಲೇ ನಾವು ನಿರ್ಮಿಸಬೇಕಾಗಿರುವ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳೀಯ ಸಂಸ್ಥೆ ಪರವಾನಿಗೆಯನ್ನೂ ನೀಡುತ್ತಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಎರಡೂ ವಿಷಯಗಳನ್ನು ನೆನಪಿಸಿ, ಅವುಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಸ್ಥೆ ಈಗಾಗಲೇ ಹಲವು ಪತ್ರಗಳನ್ನು ಬರೆದಿದೆ. ದುರಾದೃಷ್ಟವಶಾತ್, ಇದನ್ನು ತಪ್ಪಾಗಿ ಅರ್ಥೈಸಿದ ಕೆಲವು ಗಣ್ಯರು ಹಾಗೂ ಜವಾಬ್ದಾರಿಯುತ ನಾಗರಿಕರು ಬಿಆರ್‌ಎಸ್ ಗ್ರೂಪ್ ಸಂಸ್ಥೆ ಆಸ್ಪತ್ರೆಯನ್ನು ಸರಕಾರಕ್ಕೆ ಒಪ್ಪಿಸಲು ನಿರ್ಧರಿಸಿದ್ದಾಗಿ ಕೆಲವು ಸ್ಥಳೀಯ ಪತ್ರಿಕೆಗಳು ಹಾಗೂ ಮಾಧ್ಯಮಗಳಿಗೆ ತಿಳಿಸಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಂಸ್ಥೆ ಸ್ಪಷ್ಟೀಕರಣದಲ್ಲಿ ತಿಳಿಸಿದೆ.