×
Ad

ಹೊಟೇಲ್ ಕ್ವಾರೈಂಟೇನ್ ಹಿಂದೆ ಕಮಿಷನ್ ಲಾಬಿ: ಮೊದಿನಬ್ಬ ಆರೋಪ

Update: 2020-05-13 20:49 IST

ಉಡುಪಿ, ಮೇ 13: ದುಬೈಯಿಂದ ಮಂಗಳೂರಿಗೆ ತಲುಪಿದ ವಿಮಾನ ಪ್ರಯಾಣಿಕರನ್ನು ವಿಮಾನನಿಲ್ದಾಣದಲ್ಲೇ ಬಲವಂತದ ಹೋಟೆಲ್ ಕ್ವಾರೈಂಟೇನ್‌ಗೆ ಒತ್ತಾಯಿಸಿರುವುದರಿಂದ ಜಿಲ್ಲಾಡಳಿತ ತಲೆತಗ್ಗಿಸುವಂತಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ. ಮೊದಿನಬ್ಬ ಟೀಕಿಸಿದ್ದಾರೆ.

ಅನಿವಾಸಿ ಕನ್ನಡಿಗರು ನಮ್ಮನ್ನು ದಾರುಲ್ ಇರ್ಶಾದ್ ಅಥವಾ ಅಲ್ ಮದೀನಾ ಹಾಸ್ಟೆಲ್ನಲ್ಲಿ ಏರ್ಪಡಿಸಿದ ಕ್ವಾರೈಂಟೇನ್ಗೆ ತಲುಪಿಸಿ ಎಂದಾಗ, ಅಲ್ಲಿಗೆ ಅಂಬ್ಯುಲೆನ್ಸ್ ಸೇವೆ ಒದಗಿಸಲಾಗುವುದಿಲ್ಲ. ದಾದಿಗಳ ವ್ಯವಸ್ಥೆ ಇಲ್ಲ. ಸೂಪರ್ ವೈಸರ್ ನೇಮಕವಾಗಿಲ್ಲ ಎಂದು ಕಮಿಷನ್ ದಂಧೆಯ ಕರಾಳ ಗಬ್ಬು ವಾಸನೆ ಮೂಗಿಗೆ ಬಡಿಯುವಂತೆ ಮಾತನಾಡಿದ್ದಾರೆ ಎಂದು ಅವರು ದೂರಿದ್ದಾರೆ.

ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ಹಾಸ್ಟೆಲ್ಗಳಿಗೆ ಸಿಬ್ಫಂದಿಗಳನ್ನು ನೇಮಕ ಮಾಡಿ ಅಂಬ್ಯುಲೆನ್ಸ್ ಸೇವೆ ಪೋಲೀಸ್ ಸೇವೆ ಎಲ್ಲವನ್ನೂ ಒದಗಿಸಿ ಕೊಟ್ಟ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ದಾರುಲ್ ಇರ್ಶಾದ್ ಮತ್ತು ಅಲ್ ಮದೀನಾ ಹಾಸ್ಟೇಲ್ಗಳಿಗೆ ನೇಮಕ ಮಾಡಲು ತಡೆಯಾದರೂ ಏನು? ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಕ್ವಾರೈಂಟೇನ್ ವ್ಯವಸ್ಥೆಯ ಪಟ್ಟಿಯಲ್ಲಿ ಈ ಎರಡು ಸಂಸ್ಥೆಯ ಹೆಸರು ಲಿಖಿತಗೊಂಡಿದ್ದರೂ ಸಿಬ್ಬಂದಿಗಳ ನೇಮಕಾತಿ ಮಾಡದಿರಲು ಕಾರಣವೇನು? ಎಂದು ಅವರು ಪ್ರಶ್ನಿಸಿದ್ದಾರೆ.

ಹೋಟೆಲ್ ಕ್ವಾರೈಂಟೇನ್ ವ್ಯವಸ್ಥೆಗೆ ಅನಿವಾಸಿಗಳಿಂದ ಹಣ ಪಡೆಯುವ ದಂಧೆಯ ಹಿಂದಿರುವ ಕಮಿಷನ್ ಲಾಬಿಗಳನ್ನು ಪತ್ತೆ ಹಚ್ಚಬೇಕು. ಇಸ್ಲಾಮಿಕ್ ಹಾಸ್ಟೆಲ್ಗಳಲ್ಲಿ ಉಚಿತ ಕ್ವಾರೈಂಟೇನ್ ವ್ಯವಸ್ಥೆಗೆ ಸರಕಾರಿ ಸಿಬ್ಬಂದಿಗಳನ್ನು ನೇಮಿಸಿ ಕೊಡದಿರುವ ಹಿಂದಿರುವ ಕಾಣದ ಕೈಗಳು ಯಾರು ಎಂಬುದು ಬೆಳಕಿಗೆ ಬರಬೇಕು ಎಂದು ಒತ್ತಾಯಿಸಿರುವ ಅವರು, ಈ ಕುರಿತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಮಧ್ಯ ಪ್ರವೇಶಿಸಿ ಕ್ರಮ ತೆಗೆದುಕೊಳ್ಳ ಬೇಕು. ಇಲ್ಲದಿದ್ದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News