×
Ad

ಪ್ರಧಾನಿ ಘೋಷಣೆ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಒತ್ತು: ನಳಿನ್

Update: 2020-05-13 21:10 IST

ಮಂಗಳೂರು, ಮೇ 13: ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್‌ಕ್ಕಿಂತ ಮೊದಲು ಘೋಷಣೆ ಮಾಡಿದ ಪ್ರಧಾನ ಮಂತ್ರಿ ಗರೀಬ್ ರಥ್ ಯೋಜನೆ ಹಾಗೂ ಲಾಕ್‌ಡೌನ್ ಬಳಿಕ ಘೋಷಿಸಿದ 20ಲಕ್ಷ ಕೋಟಿಯ ವಿಶೇಷ ಆರ್ಥಿಕ ಪ್ಯಾಕೇಜ್‌ನಿಂದ ಇಂದಿನ ಸಂಕಷ್ಟ ಕಾಲದಲ್ಲಿ ಜನರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವ ಜತೆಗೆ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಕಾರಣಭೂತರಾಗಿದ್ದಾರೆ ಎಂದು ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ದ.ಕ,ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ತನ್ನ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶ ಪ್ರಕೃತಿ ವಿಕೋಪ, ಪ್ಲೇಗ್, ಯುದ್ಧ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸಿದೆ. ಆದರೆ ಕೊರೊನಾದಂತಹ ಸಂಕಷ್ಟ ದೇಶದ ಇತಿಹಾಸದಲ್ಲಿಯೇ ಮೊದಲು. ಇಂತಹ ಸಮಯದಲ್ಲಿ ಪ್ರಧಾನಿ ಮೋದಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಒತ್ತು ನೀಡುವ ಕೆಲಸ ಮಾಡಿದ್ದಾರೆ. ಈ ಹಿಂದೆ ಸರಕಾರದ ಕುರಿತು ಹತ್ತಾರು ಟೀಕೆಗಳು ಬಂದಿದೆ. ಸರಕಾರ ಕಾರ್ಪೊರೇಟ್, ಉದ್ಯಮಿಗಳ ಪರವಾಗಿದೆ ಎನ್ನುವ ವಿಚಾರಕ್ಕೆ ಪ್ರಧಾನಿ ಅವರು ಅಂತ್ಯೋದಯ ಕಲ್ಪನೆಯ ಮೂಲಕ ಜನ್‌ಧನ್ ಯೋಜನೆ, ಉಜ್ವಲ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮೂಲಕ ಇದು ಜನಸಾಮಾನ್ಯರ ಸರಕಾರ, ಜನರ ಭಾವನೆಗಳ ಸರಕಾರ ಎಂಬುದನ್ನು ಸಾಬೀತು ಮಾಡಿದ್ದಾರೆ. ಈಗಾಗಲೇ ಪ್ರಧಾನಿಯ ಘೋಷಣೆಗೆ ಪೂರಕವಾಗಿ ವಿತ್ತ ಸಚಿವರು ವಲಯವಾರು ವಿಂಗಡಣೆಯ ಮೂಲಕ ಆರ್ಥಿಕ ಪ್ಯಾಕೇಜ್ ಅನುದಾನವನ್ನು ಹಂಚುವ ಕಾರ್ಯ ಮಾಡಿದ್ದಾರೆ ಎಂದರು.

ಹಂತ ಹಂತವಾಗಿ ಜಾರಿ: ವಿದೇಶದಲ್ಲಿರುವ ಅನಿವಾಸಿ ಭಾರತೀಯರನ್ನು ಕರೆತರುವ ಪ್ರಯತ್ನಗಳು ಸಾಗಿದೆ. ಕೇಂದ್ರ ಸಚಿವರಾದ ಸದಾನಂದ ಗೌಡ ಹಾಗೂ ಪ್ರಹ್ಲಾದ್ ಜೋಶಿ ಅವರ ನೇತೃತ್ವದ ಸಮಿತಿಯಿಂದ ನಾಲ್ಕು ಕೆಟಗರಿಯ ಮೂಲಕ ಈ ಕಾರ್ಯವಾಗುತ್ತಿದೆ. ಜಿಲ್ಲೆಗೆ ಈಗ ಒಂದು ವಿಮಾನ ಮಾತ್ರ ಬಂದಿದೆ. ಇನ್ನು ಕೆಲವು ವಿಮಾನಗಳು ಬರಲು ಬಾಕಿ ಉಳಿದಿದೆ. ಮೊದಲು ಗರ್ಭಿಣಿಯರು, ಬಾಣಂತಿಯರು, ವೀಸಾದ ಸಮಸ್ಯೆ ಇರುವ ಮಂದಿ, ಉದ್ಯೋಗ ಕಳೆದುಕೊಂಡವರು ಎನ್ನುವ ಪಟ್ಟಿಯ ಆಧಾರದಲ್ಲಿ ಕರೆದುಕೊಂಡು ಬರಲಾಗುತ್ತಿದೆ. ದಿಲ್ಲಿಯಿಂದ ಕೇರಳಕ್ಕೆ ನಿತ್ಯ ಒಂದು ರೈಲು ಈಗ ಬಿಡಲಾಗುತ್ತಿದೆ. ರಾಜ್ಯಕ್ಕೆ ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯವಾಗಿದೆ. ಈಗಾಗಲೇ ಮಂಗಳೂರಿಗೆ ವಿಮಾನದ ಮೂಲಕ ಬಂದ ಅನಿವಾಸಿ ಭಾರತೀಯರು ಅಲ್ಲಿಂದ ಬರುವಾಗಲೇ ಅವರಿಗೆ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿಕೊಂಡಿ ರುತ್ತಾರೆ. ಅದರ ಪ್ರಕಾರ ಕ್ವಾರಂಟೈನ್ ಹೋಟೆಲ್ ಅಥವಾ ಹಾಸ್ಟೆಲ್ ಎನ್ನುವುದು ನಿರ್ಧಾರವಾಗುತ್ತದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಕಾರ್ಪೊರೇಟರ್ ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News