×
Ad

ಮಂಗಳೂರು ವಿಮಾನ ನಿಲ್ದಾಣದಲ್ಲಿ ತೊಂದರೆಗೀಡಾದ ಅನಿವಾಸಿ ಕನ್ನಡಿಗರು: ವಿವಿಧ ಸಂಘಟನೆಗಳ ಖಂಡನೆ

Update: 2020-05-13 21:30 IST

 ಎಸ್‌ವೈಎಸ್: ಯುಎಇಯಿಂದ ಬಂದ ಮೊದಲ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣ ತಲುಪಿದ ಗರ್ಭಿಣಿಯರು, ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಪ್ರಯಾಣಿಕರಿಗೆ ಮಂಗಳವಾರ ರಾತ್ರಿ ನಡೆದ ಕಹಿ ಅನುಭವವು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಜಿಲ್ಲಾಡಳಿತದ ಸಂಪೂರ್ಣ ವೈಫಲ್ಯದ ಸಂಕೇತವೆಂದು ಸುನ್ನಿ ಯುವಜನ ಸಂಘರಾಜ್ಯ ಸಮಿತಿ ಅಭಿಪ್ರಾಯ ಪಟ್ಟಿದೆ, ಅಲ್ಲದೆ ಘಟನೆಯನ್ನು ತೀವ್ರವಾಗಿ ಖಂಡಿಸಿದೆ.

ಅನಿವಾಸಿ ಕನ್ನಡಿಗರು ರಜೆಯ ಖುಷಿಯಿಂದ ಊರಿಗೆ ಮರಳಿದವರಲ್ಲ. ತಮ್ಮ ಕೆಲಸ, ವ್ಯವಹಾರವನ್ನೆಲ್ಲ ಕಳಕೊಂಡು ಶೂನ್ಯ ಭವಿಷ್ಯಕ್ಕೆ ದೃಷ್ಟಿ ನೆಟ್ಟು ನಿರಾಶರಾಗಿ ಬಂದ ಅನಿವಾಸಿಗಳು. ಅವರಿಗೆ ಬೇಕಾದ ಪ್ರಾಥಮಿಕ ವ್ಯವಸ್ಥೆ ಮಾಡಿಕೊಡಲು ಜಿಲ್ಲಾಡಳಿತದಿಂದ ಸಾಧ್ಯವಾಗದ್ದು ಖೇದಕರ. ರಮಝಾನ್ ಉಪವಾಸ ಆಚರಿಸಿದ ಮುಸ್ಲಿಂ ಯಾತ್ರಿಕರು, ಬೆಳಗ್ಗಿನಿಂದಲೇ ದುಬೈ ಏರ್ಪೋರ್ಟ್‌ನಲ್ಲಿ ವಿವಿಧ ಪ್ರಕ್ರಿಯೆಗಳಲ್ಲಿ ಭಾಗಿಗಳಾಗಿ ತಡರಾತ್ರಿ ಮಂಗಳೂರು ಬಂದು ತಲುಪಿದರೆ ಅಲ್ಲಿ ಒಂದು ಲೋಟ ನೀರಿಗೂ ಪರದಾಡಬೇಕಾದ ಅವಸ್ಥೆ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿಯೂ ತಾರತಮ್ಯ ನೀತಿ ಪಾಲಿಸುವ ಈ ಕ್ರಮವನ್ನು ನಾಗರಿಕ ಸಮಾಜ ಖಂಡಿಸಬೇಕಾಗಿದೆ ಎಂದು ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಮುಸ್ಲಿಂ ಜಮಾಅತ್: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನಿವಾಸಿ ಕನ್ನಡಿಗರನ್ನು ಕ್ವಾರಂಟೈನ್‌ಗೊಳಪಡಿಸುವ ಮುನ್ನ ಜಿಲ್ಲಾಡಳಿತ ಸತಾಯಿಸಿರುವ ಕೃತ್ಯವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಬಲವಾಗಿ ಖಂಡಿಸಿದೆ. ವಿದೇಶದಿಂದ ಬರುವ ಅನಿವಾಸಿಗಳಿಗೆ ತೊಂದರೆಯಾಗಬಾರದೆಂಬ ನೆಲೆಯಲ್ಲಿ ಮಾಣಿ ಬಳಿಯ ದಾರುಲ್ ಇರ್ಷಾದ್ ಮತ್ತು ಮಂಜನಾಡಿಯ ಅಲ್ ಮದೀನಾ ವಿದ್ಯಾಸಂಸ್ಥೆಗಳನ್ನು ಕ್ವಾರಂಟೈನ್ ಕೇಂದ್ರವಾಗಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು. ಅಲ್ಲದೆ ಈ ಎರಡೂ ಕೇಂದ್ರಗಳಲ್ಲಿ ಕ್ವಾರಂಟೈನ್‌ಗೆ ಒಳಗಾಗುವ ಎಲ್ಲರಿಗೂ ಉಚಿತ ವಸತಿ ಮತ್ತು ಆಹಾರದ ವ್ಯವಸ್ಥೆಯನ್ನು ನೀಡುವ ಬಗ್ಗೆಯೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿತ್ತು. ಜಿಲ್ಲಾಡಳಿತ ಪಟ್ಟಿ ಮಾಡಿದ ಕ್ವಾರಂಟೈನ್ ಸೆಂಟರ್‌ಗಳ ಪಟ್ಟಿಯಲ್ಲೂ ಈ ಎರಡು ಸಂಸ್ಥೆಗಳನ್ನು ಸೇರಿಸಲಾಗಿತ್ತು. ವಿದೇಶದಿಂದ ಬರುವ ಹಲವು ಪ್ರಯಾಣಿಕರಿಗೆ ಕ್ವಾರಂಟೈನ್ ಸೆಂಟರ್‌ಗಳ ಪಟ್ಟಿಯಲ್ಲಿ ದಾರುಲ್ ಇರ್ಷಾದ್ ಮತ್ತು ಅಲ್ ಮದೀನಾ ಇರುವುದನ್ನು ಕಂಡು ಈ ಎರಡೂ ಸಂಸ್ಥೆಗಳ ಆಡಳಿತದೊಂದಿಗೆ ಸಂಪರ್ಕಿಸಿ ಮಾಹಿತಿ ಕೋರಿದ್ದರು. ಈ ವಿವರವನ್ನು ಜಿಲ್ಲಾಡಳಿತಕ್ಕೂ ತಿಳಿಸಲಾಗಿತ್ತು. ಆದರೆ ಜಿಲ್ಲಾಡಳಿತ ಯಾವುದೇ ನೋಡಲ್ ಅಧಿಕಾರಿಗಳನ್ನು ಈ ಸಂಸ್ಥೆಗಳಿಗೆ ನೇಮಕ ಮಾಡದಿರುವುದರಿಂದ ಪ್ರಯಾಣಿಕರಿಗೆ ಅವಕಾಶ ತಪ್ಪಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ, ಕಾರ್ಯದರ್ಶಿಗಳಾದ ಹಮೀದ್ ಬಜ್ಪೆ, ಅಶ್ರಫ್ ಕಿನಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಸ್ಲಿಂ ಲೀಗ್ : ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನಿವಾಸಿ ಕನ್ನಡಿಗ ಯಾತ್ರಿಕರೊಂದಿಗೆ ಅಮಾನವೀಯವಾಗಿ ವರ್ತಿಸಿರುವ ಕೃತ್ಯವನ್ನು ದ.ಕ.ಜಿಲ್ಲಾ ಮುಸ್ಲಿಂ ಖಂಡಿಸಿದೆ. ಕೊರೋನ ಹಿನ್ನೆಲೆಯಲ್ಲಿ ವಾಪಸ್ ಆದವರನ್ನು ವಿಮಾನ ನಿಲ್ದಾಣದಲ್ಲಿ ಅತ್ಯಂತ ಗೌರವದಿಂದ ಕಾಣಬೇಕಿತ್ತು. ಗರ್ಭಿಣಿರಿಗೆ ಒಂದು ಗ್ಲಾಸು ನೀರು ಕೂಡಾ ಸಿಗದೆ ಐದಾರು ಗಂಟೆ ಪರದಾಡಬೇಕಾಗಿ ಬಂದದ್ದು ಇದು ಜಿಲ್ಲಾಡಳಿತದ ಬೇಜವಾಬ್ದಾರಿ ವರ್ತನೆಯನ್ನು ಸೂಚಿಸುತ್ತದೆ ಎಂದು ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ತಬೂಕ್ ಅಬ್ದುರ್ರಹ್ಮಾನ್ ದಾರಿಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News