ಕೊರೋನ ವೈರಸ್ : ದ.ಕ. ಜಿಲ್ಲೆಯಲ್ಲಿ 148 ವರದಿ ನೆಗೆಟಿವ್; 1 ಪಾಸಿಟಿವ್
ಮಂಗಳೂರು, ಮೇ 13: ಕೊರೋನ ವೈರಸ್ ರೋಗಕ್ಕೆ ಸಂಬಂಧಿಸಿ ಬುಧವಾರ ಪ್ರಯೋಗಾಲಯದಿಂದ ಸ್ವೀಕರಿಸಲಾದ 149 ವರದಿಗಳ ಪೈಕಿ 148 ವರದಿ ನೆಗೆಟಿವ್ ಮತ್ತು 1 ವರದಿ ಪಾಸಿಟಿವ್ ಬಂದಿದೆ. ಇನ್ನೂ 138 ಮಂದಿಯ ವರದಿ ಬರಲು ಬಾಕಿ ಇದೆ.
ಬುಧವಾರ 23 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದ್ದು, ಇದರೊಂದಿಗೆ ಈವರೆಗೆ 40,727 ಮಂದಿಯ ಸ್ಕ್ರೀನಿಂಗ್ ಮಾಡಿದಂತಾಗಿದೆ. ಸಂಚಾರ ಕ್ಲಿನಿಕ್‌ನಲ್ಲಿ 59 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಜ್ವರ ಕ್ಲಿನಿಕ್‌ಗಳಲ್ಲಿ ಈವರೆಗೆ 3,138 ಮಂದಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಎನ್‌ಐಟಿಕೆಯಲ್ಲಿ 22 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.
ಈವರೆಗೆ 4,625 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆ ಪೈಕಿ 4,487 ಮಂದಿಯ ವರದಿಯನ್ನು ಸ್ವೀಕರಿಸಲಾ ಗಿದ್ದು, ಅದರಲ್ಲಿ 4,453 ಮಂದಿಯ ವರದಿಯು ನೆಗೆಟಿವ್ ಮತ್ತು 34 ಮಂದಿಯ ವರದಿಯು ಪಾಸಿಟಿವ್ ಬಂದಿದೆ. ಪಾಸಿಟಿವ್ ಪೈಕಿ 26 ದ.ಕ. ಜಿಲ್ಲೆಯ ನಿವಾಸಿಗಳು, ಕಾಸರಗೋಡಿನ 4, ಕಾರ್ಕಳದ 3 ಮತ್ತು ಭಟ್ಕಳದ 1 ಪ್ರಕರಣ ಸೇರಿವೆ. ಅಲ್ಲದೆ ಪಾಸಿಟಿವ್‌ಗಳ ಪೈಕಿ 15 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಈಗಾಗಲೆ ಬಿಡುಗಡೆಗೊಂಡಿದ್ದರೆ, 15 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎ.19ರಂದು ಮಹಿಳೆ ಮತ್ತು ಎ.23 ಹಾಗೂ ಎ. 30ರಂದು ಇಬ್ಬರು ವೃದ್ಧೆಯರು, ಮೇ 13ರಂದು ಮಹಿಳೆಯ ಸಹಿತ ಒಟ್ಟು ನಾಲ್ಕು ಮಂದಿ ಮೃತಪಟ್ಟಿದ್ದಾರೆ.