ಸ್ವಲ್ಪ ಹೊಗೆ, ಕೆಟ್ಟ ವಾಸನೆ ಜನರ ಸಾವಿಗೆ ಕಾರಣ: ಅನಿಲ ಸೋರಿಕೆ ಪ್ರಕರಣದ ಎಫ್ ಐಆರ್!

Update: 2020-05-13 16:15 GMT

ವಿಶಾಖಪಟ್ಟಣ,ಮೇ 13: ಇಲ್ಲಿಗೆ ಸಮೀಪದ ಆರ್‌ಆರ್ ವೆಂಕಟಾಪುರಮ್‌ನಲ್ಲಿಯ ಎಲ್‌ಜಿ ಪಾಲಿಮರ್ಸ್ ಇಂಡಿಯಾ ಕಂಪನಿಯಲ್ಲಿ ಮೇ 7ರಂದು ಬೆಳಗಿನ ಜಾವ ಸಂಭವಿಸಿದ್ದ ಅನಿಲ ಸೋರಿಕೆ ದುರಂತದ ಎಫ್‌ಐಆರ್‌ನಲ್ಲಿ ಜನರ ಸಾವುಗಳಿಗೆ ‘ಸ್ವಲ್ಪ ಹೊಗೆ’ ಮತ್ತು ‘ಕೆಟ್ಟ ವಾಸನೆ’ ಕಾರಣವಾಗಿತ್ತೆಂದು ಉಲ್ಲೇಖಿಸಲಾಗಿದೆ. ಕಂಪನಿಯ ಯಾವುದೇ ಅಧಿಕಾರಿಗಳನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿಲ್ಲ.

ಕಂಪನಿಯ ಎರಡು ಬೃಹತ್ ಟ್ಯಾಂಕ್‌ಗಳಿಂದ ಸೋರಿಕೆಯಾಗಿದ್ದ ಸ್ಟೈರಿನ್ ಅನಿಲವು ಸುಮಾರು ಮೂರು ಕಿ.ಮೀ.ತ್ರಿಜ್ಯದಲ್ಲಿಯ ಪ್ರದೇಶದಲ್ಲಿ ವ್ಯಾಪಿಸಿದ ಪರಿಣಾಮ ಒಂದು ಮಗು ಸೇರಿದಂತೆ ಕನಿಷ್ಠ 11 ಜನರು ಮೃತಪಟ್ಟಿದ್ದರು ಮತ್ತು ನೂರಾರು ಜನರು ಅಸ್ವಸ್ಥಗೊಂಡಿದ್ದರು.

ಅನಿಲ ಸೋರಿಕೆಯಾದ ಐದು ಗಂಟೆಗಳ ಬಳಿಕ ಆರ್‌ಆರ್ ವೆಂಕಟಾಪುರಂ ಗ್ರಾಮದ ಕಂದಾಯಾಧಿಕಾರಿ ಎಂ.ವಿ.ಸುಬ್ಬರಾವ್ ಗೋಪಾಲಪಟ್ಟಣಂ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಈ ದೂರಿನಲ್ಲಿ ಅದಾಗಲೇ 10 ಸಾವುಗಳು ದೃಢಪಟ್ಟಿದ್ದರೂ ಕೇವಲ ಐದು ಸಾವುಗಳನ್ನು ಉಲ್ಲೇಖಿಸಲಾಗಿದೆ. ಆ ವೇಳೆಗಾಗಲೇ ಸೋರಿಕೆಯಾಗಿದ್ದು ಸ್ಟೈರಿನ್ ಅನಿಲ ಎಂದು ಪೊಲೀಸರು ದೃಢಪಡಿಸಿದ್ದರೂ ಈ ವಿಷಯವನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿಲ್ಲ.

ಎಫ್‌ಐಆರ್‌ನಲ್ಲಿ ಕಂಪನಿಯ ಅಧಿಕಾರಿಗಳನ್ನು ಹೆಸರಿಸಿರದಿದ್ದರೂ,ಕಾರ್ಖಾನೆಯನ್ನು ನಡೆಸುವ ಹೊಣೆಗಾರಿಕೆಯುಳ್ಳ ಪ್ರತಿಯೊಬ್ಬ ವ್ಯಕ್ತಿಯ ಪಾತ್ರವನ್ನೂ ತನಿಖೆಯು ಪರಿಶೀಲಿಸಲಿದೆ. ಉನ್ನತಾಧಿಕಾರ ಸಮಿತಿ ಮತ್ತು ತಜ್ಞರ ಸಮಿತಿ ಕೂಡ ಸೀನಿಯರ್ ಮ್ಯಾನೇಜರ್‌ಗಳ ಪಾತ್ರವನ್ನು ಪರಿಶೀಲಿಸುತ್ತಿವೆ ಎಂದು ವಿಶಾಖಪಟ್ಟಣ ಪೊಲೀಸ್ ಆಯುಕ್ತ ರಾಜೀವ ಕುಮಾರ ಮೀನಾ ತಿಳಿಸಿದರು.

ಕಂಪನಿಯ ಮೂವರು ಹಿರಿಯ ಅಧಿಕಾರಿಗಳಾದ ಅಧ್ಯಕ್ಷ ಹಾಗೂ ಎಂಡಿ ಸಂಕೀ ಜಿಯಾಂಗ್,ತಾಂತ್ರಿಕ ಸಲಹೆಗಾರ ಕಿಮ್ ಡಿಯಾಝ್ ಹಾಗೂ ಮಹಾ ಪ್ರಬಂಧಕ ಮತ್ತು ಕಾರ್ಯಾಚರಣೆೆಗಳ ನಿರ್ದೇಶಕ ಪಿ.ಪಿ.ಚಂದ್ರಮೋಹನರಾವ್ ಅವರು ಅವಘಡ ಸಂಭವಿಸಿದಾಗ ಫ್ಯಾಕ್ಟರಿಯಲ್ಲಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News