ಬೀಗಮುದ್ರೆ ಸಡಿಲಿಕೆಯಲ್ಲಿ ಅವಸರ ಬೇಡ: ಏಶ್ಯ, ಯುರೋಪ್‌ಗಳಿಗೆ ಐಎಂಎಫ್ ಎಚ್ಚರಿಕೆ

Update: 2020-05-13 18:02 GMT

ವಾಶಿಂಗ್ಟನ್, ಮೇ 13: ಏಶ್ಯ ಮತ್ತು ಯುರೋಪ್‌ಗಳಲ್ಲಿ ವಿಧಿಸಲಾಗಿರುವ ಕೊರೋನ ವೈರಸ್ ನಿರ್ಬಂಧಗಳನ್ನು ಬೇಗನೇ ತೆರವುಗೊಳಿಸಿ ವ್ಯಾಪಾರ-ಉದ್ದಿಮೆಗಳನ್ನು ಪುನರಾರಂಭಿಸಿದರೆ ಸಾಂಕ್ರಾಮಿಕವು ಮತ್ತೊಮ್ಮೆ ಸ್ಫೋಟಗೊಳ್ಳಬಹುದು ಎಂದು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಹಿರಿಯ ಅರ್ಥಶಾಸ್ತ್ರಜ್ಞರು ಮಂಗಳವಾರ ಎಚ್ಚರಿಸಿದ್ದಾರೆ.

ಉದ್ದಿಮೆಗಳನ್ನು ಇಷ್ಟು ಬೇಗನೇ ಪುನರಾರಂಭಿಸಿದರೆ, ಸೋಂಕು ಹರಡುವಿಕೆಯನ್ನು ತಡೆಯುವಲ್ಲಿ ಈವರೆಗೆ ಸಾಧಿಸಲಾಗಿರುವ ಪ್ರಗತಿಯೂ ಕೈಬಿಟ್ಟುಹೋಗಬಹುದು ಹಾಗೂ ಹೊಸ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಬಹುದು ಎಂದು ಏಶ್ಯ ಮತ್ತು ಯುರೋಪ್‌ಗಳ ಐಎಂಎಫ್ ಮುಖ್ಯಸ್ಥರಾದ ಚಾಂಗ್ ಯೊಂಗ್ ರೀ ಮತ್ತು ಪೌಲ್ ಥಾಮ್ಸನ್ ಬ್ಲಾಗ್ ಲೇಖನವೊಂದರಲ್ಲಿ ಹೇಳಿದ್ದಾರೆ.

ದಕ್ಷಿಣ ಮತ್ತು ಪೂರ್ವ ಏಶ್ಯದಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಸುಮಾರು 9,700 ಮಂದಿ ಸಾವನ್ನಪ್ಪಿದ್ದಾರೆ. ಯುರೋಪ್ ಕೊರೋನ ವೈರಸ್‌ನ ಭೀಕರ ದಾಳಿಗೆ ಒಳಗಾದ ಖಂಡವಾಗಿದೆ. ಅಲ್ಲಿ 18 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ 1.6 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಜಗತ್ತಿನಾದ್ಯಂತ ವಿಧಿಸಲಾಗಿರುವ ಬೀಗಮುದ್ರೆಗಳು ಜನರ ಮಾನಸಿಕ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿವೆ ಎನ್ನುವುದು ಸತ್ಯ. ಇದನ್ನು ಹೋಗಲಾಡಿಸುವುದಕ್ಕಾಗಿ ವ್ಯಾಪಾರ ಮತ್ತು ಉದ್ದಿಮೆಗಳನ್ನು ಪುನರಾರಂಭಿಸಲು ದೇಶಗಳು ಉತ್ಸುಕವಾಗಿರುವುದು ಸಹಜವೇ ಆಗಿದೆ ಎಂದು ಬ್ಲಾಗ್ ಹೇಳಿದೆ.

ಆದರೆ, ಏಶ್ಯ ಮತ್ತು ಯುರೋಪ್‌ಗಳು ಉದ್ದಮೆಗಳನ್ನು ಪುನರಾರಂಭಿಸುವಾಗ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡೇಕಾಗಿದೆ ಎಂದು ಅದು ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News