ಕೊರೋನವೈರಸ್ ಶಾಶ್ವತವಾಗಿ ಜಗತ್ತಿನಿಂದ ದೂರವಾಗುವ ಸಾಧ್ಯತೆಯಿಲ್ಲ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
Update: 2020-05-14 14:10 IST
ಜಿನೀವಾ: ಕೊರೋನವೈರಸ್ ಯಾವತ್ತೂ ಜಗತ್ತಿನಿಂದ ದೂರವಾಗುವ ಸಾಧ್ಯತೆಯಿಲ್ಲ ಹಾಗೂ ಜನರು ಎಚ್‍ಐವಿ ಜತೆಗೆ ಬದುಕಿದಂತೆ ಈ ವೈರಸ್ ಜತೆಗೂ ಬದುಕಲು ಕಲಿಯಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಜಾಗತಿಕವಾಗಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮೂರು ಲಕ್ಷದ ಗಡಿ ಸಮೀಪಿಸುತ್ತಿರುವಂತೆ ವಿಶ್ವ ಆರೋಗ್ಯ ಸಂಸ್ಥೆಯ ಈ ಎಚ್ಚರಿಕೆ ಬಂದಿದೆ.
ಈ ವೈರಸ್ ನಾಶಪಡಿಸಲು ಹಲವು ದೇಶಗಳು ಲಸಿಕೆಗಳ ಅಭಿವೃದ್ಧಿಯಲ್ಲಿ ತೊಡಗಿದ್ದರೂ ಈ ವೈರಸ್ ಸಂಪೂರ್ಣವಾಗಿ ನಾಶವಾಗುವ ಸಾಧ್ಯತೆಯಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
"ಈ ವೈರಸ್ ಇನ್ನೊಂದು ಸಾಂಕ್ರಾಮಿಕ ವೈರಸ್ ಆಗಬಹುದು, ಹಾಗೂ ಅದು ಜಗತ್ತನ್ನು ಬಿಟ್ಟು ಹೋಗದೇ ಇರಬಹುದು'' ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸೇವೆಗಳ ನಿರ್ದೇಶಕ ಮೈಕೇಲ್ ರಯಾನ್ ಹೇಳಿದ್ದಾರೆ.
“ಎಚ್‍ಐವಿ ಈ ಜಗತ್ತು ಬಿಟ್ಟು ತೊಲಗಿಲ್ಲ, ಆದರೆ ನಾವು ಅದರ ಜತೆ ಬಾಳಲು ಕಲಿತಿದ್ದೇವೆ'' ಎಂದು ಅವರು ಹೇಳಿದರು.