×
Ad

ಪಾವತಿ ಕ್ವಾರಂಟೈನ್‌ಗೆ ಒತ್ತಾಯಪಡಿಸುತ್ತಿರುವ ರಾಜ್ಯ ಬಿಜೆಪಿ ಸರಕಾರದ ನಿಲುವು ಅಮಾನುಷ: ಪಾಪ್ಯುಲರ್ ಫ್ರಂಟ್

Update: 2020-05-14 14:26 IST

ಬೆಂಗಳೂರು : ಹೊರ ರಾಜ್ಯಗಳಿಂದ ಬರುವ ಕನ್ನಡಿಗರಿಗೆ ಪಾವತಿ ಕ್ವಾರಂಟೈನ್‌ಗೆ ಬಲವಂತಪಡಿಸುತ್ತಿರುವ ರಾಜ್ಯ ಸರಕಾರದ ಅಮಾನುಷ ನಿಲುವನ್ನು ಖಂಡಿಸುವುದಾಗಿ ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಷಾ ತಿಳಿಸಿದ್ದಾರೆ.

ಹೊಸೂರು ರಸ್ತೆಯ ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ತಾಯಂದಿರು, ಮಕ್ಕಳು, ಅಂಗವಿಕಲರನ್ನು ಸುಡುಬಿಸಿಲಿನಲ್ಲಿಯೇ ನಿಲ್ಲಿಸಿ ಸತಾಯಿಸಿದ ಘಟನೆ ನಡೆದಿದೆ. ರಾಜ್ಯ ಸರಕಾರವು ಪಾವತಿ ಕ್ವಾರಂಟೈನ್‌ಗೆ ಬಲವಂತಪಡಿಸುತ್ತಿದ್ದರೆ, ತವರು ರಾಜ್ಯಕ್ಕೆ ಮರಳುತ್ತಿರುವ ಕನ್ನಡಿಗರು ಹೋಂ ಕ್ವಾರಂಟೈನ್‌ಗೆ ಮನವಿ ಮಾಡುತ್ತಿದ್ದಾರೆ. ಈ ನಡುವೆ ಸರಕಾರವು ಉಚಿತ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡುತ್ತಲೂ ಇಲ್ಲ ಮತ್ತು ಹೋಂ ಕ್ವಾರಂಟೈನ್‌ಗೂ ಅವಕಾಶ ನೀಡುತ್ತಿಲ್ಲ. ಇದು ಸರಕಾರದ ಮನುಷ್ಯ ವಿರೋಧಿ, ಜೀವ ವಿರೋಧಿ ನಿಲುವನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ದುಬೈಯಿಂದ ತವರಿಗೆ ಮರಳಿದ ಅನಿವಾಸಿ ಕನ್ನಡಿಗರ ಮೇಲೆ ವಿಮಾನ ನಿಲ್ದಾಣದಲ್ಲಿ ನಡೆದಿರುವ ದಬ್ಬಾಳಿಕೆ ಅಕ್ಷಮ್ಯ. ಇಲ್ಲಿ ಗರ್ಭಿಣಿಯರು, ರೋಗಿಗಳು, ಮಕ್ಕಳನ್ನು ಅನ್ನಾಹಾರ ನೀಡದೇ ಗಂಟೆಗಳ ಕಾಲ ಸತಾಯಿಸಲಾಗಿದೆ. ಜೊತೆಗೆ ಪಾವತಿ ಕ್ವಾರಂಟೈನ್‌ಗೂ ಬಲವಂತಪಡಿಸಲಾಗಿದೆ. ಈಗಾಗಲೇ ವಿಮಾನ ಯಾನಕ್ಕೆ ದುಪ್ಪಟ್ಟು ಹಣ ತೆತ್ತು ಊರಿಗೆ ಮರಳಿರುವ ಅನಿವಾಸಿಗರು ತೀವ್ರ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಜೊತೆಗೆ ದುಬಾರಿ ವೆಚ್ಚದ ಕ್ವಾರಂಟೈನ್‌ಗೆ ಅನಿವಾರ್ಯಪಡಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈಗಾಗಲೇ ಕೊರೋನ ಜನ ಜೀವನವನ್ನು ಗಂಭೀರವಾಗಿ ಬಾಧಿಸಿದೆ. ಸುದೀರ್ಘ ಸಮಯದ ಲಾಕ್‌ಡೌನ್‌ನ ಕಾರಣದಿಂದಾಗಿ ಹೊರ ರಾಜ್ಯಗಳಲ್ಲಿ ಅನಿವಾರ್ಯವಾಗಿ ಉಳಿದುಕೊಂಡಿರುವ ಜನರು ಆದಾಯದ ಮೂಲವಿಲ್ಲದೇ ತತ್ತರಿಸಿ ಹೋಗಿದ್ದಾರೆ. ಇದರಿಂದಾಗಿ ಬಹುತೇಕ ಮಂದಿ ಹೊಟ್ಟೆಪಾಡಿಗೂ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಇಂತಹ ಒಂದು ಗಂಭೀರ ಪರಿಸ್ಥಿತಿಯಲ್ಲಿ ಮಾನವೀಯ ನೆಲೆಯಲ್ಲಿ ಆಸರೆಯಾಗಬೇಕಾದ ರಾಜ್ಯ ತನ್ನ ನಿರಂಕುಶ ಧೋರಣೆಯನ್ನು ತಾಳಿರುವುದು ಖಂಡನೀಯವಾಗಿದೆ‌. ಅದೇ ರೀತಿ ಕನ್ನಡಿಗರ ಇಂತಹ ಸಮಸ್ಯೆಯನ್ನು ಪರಿಹರಿಸುವಲ್ಲಿ ರಾಜ್ಯ ಸರಕಾರವು ವೈಫಲ್ಯವನ್ನು ಕಂಡಿರುವುದು ಬಹಳ ಸ್ಪಷ್ಟವಾಗಿದೆ.

ರಾಜ್ಯ ಸರಕಾರವು ಅನಿವಾಸಿ ಕನ್ನಡಿಗರು ಮತ್ತು ಇತರ ರಾಜ್ಯಗಳಲ್ಲಿ ಉಳಿದಿರುವ ಕನ್ನಡಿಗರ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಪಾವತಿ ಕ್ವಾರಂಟೈನ್‌ಗೆ ಪೀಡಿಸುವುದನ್ನು ನಿಲ್ಲಿಸಬೇಕು. ಸಂಘಸಂಸ್ಥೆಗಳ ಸಹಕಾರದೊಂದಿಗೆ ಸರಕಾರಿ ವೆಚ್ಚದಲ್ಲಿ ಕನ್ನಡಿಗರಿಗೆ ತುರ್ತಾಗಿ ಕ್ವಾರಂಟೈನ್‌ ವ್ಯವಸ್ಥೆ ಮಾಡಬೇಕೆಂದು ನಾಸಿರ್ ಪಾಷಾ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News