ದ.ಕ.: ಷರತ್ತುಬದ್ಧ ಮೀನುಗಾರಿಕೆ ಆರಂಭ; ಕಡಲಿಗಿಳಿದ ಸಣ್ಣ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳು
ಮಂಗಳೂರು, ಮೇ 14: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ಹಾವಳಿಯಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಯಾಂತ್ರೀಕೃತ ಮೀನುಗಾರಿಕೆ ಜೀವ ಪಡೆದಿದೆ. ಇಂದಿನಿಂದ ಷರತ್ತಿನೊಂದಿಗೆ ಕೆಲ ಸಣ್ಣ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಸಣ್ಣ ದೋಣಿಗಳು ಕಡಲಲ್ಲಿ ಮೀನುಗಾರಿಕೆ ಆರಂಭಿಸಿವೆ.
ದ.ಕ. ಜಿಲ್ಲೆಯೊಳಗೆ 110 ಅಶ್ವಶಕ್ತಿ ಸಾಮರ್ಥ್ಯದ ಸಣ್ಣ ಯಾಂತ್ರೀಕೃತ ದೋಣಿಗಳಲ್ಲಿ ಮೀನುಗಾರಿಕೆ ನಡೆಸಬಹುದು ಎಂದು ಮೀನುಗಾರಿಕಾ ಇಲಾಖೆಯು ಷರತ್ತುಗಳೊಂದಿಗೆ ಬುಧವಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಉಳ್ಳಾಲ ಕೋಡಿ ಹಾಗೂ ತೋಟಬೆಂಗ್ರೆಯಲ್ಲಿ ನಿಗದಿತ ದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮೀನುಗಾರಿಕಾ ಬೋಟುಗಳು ಸಮುದ್ರದಲ್ಲಿ ಮೀನುಗಾರಿಕೆ ನಡೆಸಬಹುದಾಗಿದೆ. ನಿಗದಿತ ಮೀನು ಗಾರಿಕಾ ಇಳಿದಾಣಗಳಿಗೆ ಹಂತ ಹಂತವಾಗಿ ಐದು ಬೋಟುಗಳಿಗೆ ಮೀರದಂತೆ ಹಿಂತಿರುಗಬೇಕು. ಬೇರೆ ರಾಜ್ಯದ ಮೀನುಗಾರಿಕಾ ಬಂದರು/ ಇಳಿದಾಣ ಕೇಂದ್ರಗಳಿಗೆ ಪ್ರವೇಶಿಸಲು ಅವಕಾಶವಿಲ್ಲ. ಜೂನ್ 1ರಿಂದ ಜುಲೈ 31ರವರೆಗೆ ಮೀನುಗಾರಿಕಾ ನಿಷೇಧ ಅವಧಿಯಾಗಿರು ವುದರಿಂದ ಯಾಂತ್ರೀಕೃತ ದೋಣಿಗಳು ಮೇ 31ರೊಳಗೆ ಬಂದರು/ ಇಳಿದಾಣಗಳಿಗೆ ಮರಳಬೇಕು ಎಂದು ಇಲಾಖೆಯ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಮೀನುಗಾರಿಕಾ ಬಂದರು/ ಇಳಿದಾಣ ಕೇಂದ್ರಗಳಲ್ಲಿ ಮೀನು ಹಿಡುವಳಿಯ ಹರಾಜು ಪ್ರಕ್ರಿಯೆ ನಡೆಸುವಂತಿಲ್ಲ. ಮೀನುಗಳ ಚಿಲ್ಲರೆ ಮಾರಾಟಕ್ಕೆ ಅವಕಾಶವಿಲ್ಲ. ಇಳಿಸಲಾದ ಮೀನುಗಳನ್ನು ಸಾಗಾಟ ವಾಹನಗಳಿಗೆ ತುಂಬಿಸಿ ಬಂದರು/ ಇಳಿದಾಣ ಕೇಂದ್ರಗಳಿಂದ ಆದಷ್ಟು ಹೊರ ಸಾಗಿಸಬೇಕು. ಮೀನುಗಾರಿಕಾ ದೋಣಿ ಮಾಲಕರು ಸ್ಥಳೀಯವಾಗಿ ಮೀನು ಮಾರಾಟ ಮಾಡಿ ಬಾಕಿ ಉಳಿದಿರುವ ಮೀನನ್ನು ರಾಜ್ಯ, ಹೊರ ರಾಜ್ಯದಲ್ಲಿರುವ ಸಂಸ್ಕರಣಾ ಘಟಕಗಳಿಗೆ ಸಾಗಿಸಬಹುದಾಗಿದೆ.
ದೋಣಿ ಮಾಲಕರು ಎಲ್ಲಾ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್‌ವಾಶ್ ವ್ಯವಸ್ಥೆ ಮಾಡಿಕೊಳ್ಳಬೇಕು. ಮೀನುಗಾರಿಕಾ ಬಂದರು ಇಳಿದಾಣಗಳಲ್ಲಿ ಸುರಕ್ಷಿತ ಅಂತರ, ಶುಚಿತ್ವ ಕಾಪಾಡಬೇಕು. ಒಂದು ಬೋಟಿನ ಕಾರ್ಮಿಕರು ಸಮುದ್ರದ ಇನ್ನೊಂದು ಬೋಟಿನ ಕಾರ್ಮಿಕರೊಂದಿಗೆ ಸಂಪರ್ಕ/ ವಸ್ತುಗಳ ವಿನಿಮಯ ಮಾಡಬಾರದು. ಮೀನುಗಾರಿಕೆಯಲ್ಲಿ ತೊಡಗಿದಾಗ ಕೆಮ್ಮು, ತಲೆನೋವು, ಜ್ವರ, ಮೈಕೈನೋವು ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಮೀನುಗಾರಿಕಾ ಅಧಿಕಾರಿಗೆ/ ವೈದ್ಯಾಧಿಕಾರಿಗಳಿಗೆ ತಿಳಿಸಿ ಕೂಡಲೇ ಬೋಟುಗಳು ಹಿಂತಿರುಗಬೇಕು. ಇಂತಹ ಸಂದರ್ಭದಲ್ಲಿ ಹಿಡಿದ ಮೀನು ಸಮದ್ರಕ್ಕೆ ಎಸೆಯಬಾರದು ಎಂಬ ಷರತ್ತುಗಳನ್ನು ಮೀನುಗಾರರಿಗೆ ವಿಧಿಸಲಾಗಿದೆ.
‘‘ದ.ಕ. ಜಿಲ್ಲೆಯಲ್ಲಿ 101 ನೋಂದಾಯಿತ ಸಣ್ಣ ಯಾಂತ್ರೀಕೃತ ಮೀನುಗಾರಿಕಾ ಬೋಟುಗಳಿವೆ. ಅವುಗಳಲ್ಲಿ ತಲಾ 30ರಂತೆ ಉಳ್ಳಾಲ ಕೋಡಿ ಹಾಗೂ ತೋಟಬೆಂಗ್ರೆಯಿಂದ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತದ ಜತೆ ನಡೆದ ಸಭೆಯಲ್ಲಿ ಷರತ್ತುಗಳೊಂದಿಗೆ ಮೀನುಗಾರಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.’’
-ಹರೀಶ್ ಕುಮಾರ್, ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ, ದ.ಕ.
ಈ ಅವಧಿಯಲ್ಲಿ ಇನ್ನಿರುವುದು 15 ದಿನಗಳು ಮಾತ್ರ !
‘‘ಈ ಮೀನುಗಾರಿಕಾ ಅವಧಿಯಲ್ಲಿ ನಮಗೆ ಮೀನುಗಾರಿಕೆಗೆ ಇರುವುದು 15 ದಿನಗಳು ಮಾತ್ರ. ಲಾಕ್‌ಡೌನ್‌ನಿಂದಾಗಿ ಮೀನುಗಾರರ ಬದುಕು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಸಣ್ಣ ಯಾಂತ್ರೀಕೃತ ಬೋಟುಗಳಿಗೆ ಅವಕಾಶ ನೀಡಿದ್ದು, ನಮ್ಮ ವ್ಯಾಪ್ತಿಯಲ್ಲಿ 30 ದೋಣಿಗಳು ಮೀನುಗಾರಿಕೆಗೆ ತೆರಳಿವೆ. ದೋಣಿಯೊಂದರಲ್ಲಿ ಗರಿಷ್ಠ 5 ಮಂದಿಗೆ ಮಾತ್ರ ಅವಕಾಶ. ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಜತೆಗೆ ಶುಚಿತ್ವವನ್ನೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯದ ಬಗ್ಗೆಯೂ ಹೇಳಲಾಗದು. ಯಾಂತ್ರೀಕೃತ ದೋಣಿಯೊಂದು ಒಂದು ಬಾರಿ ನೀರಿಗಿಳಿದರೆ ಕನಿಷ್ಠ 75,000 ರೂ. ಖರ್ಚಾಗುತ್ತದೆ. ಆ ಖರ್ಚನ್ನು ಭರಿಸಿಕೊಂಡು ಮೀನುಗಾರಿಕೆ ಮಾಡುವುದು ಮೀನುಗಾರರ ಪಾಲಿಕೆಗೆ ಸವಾಲಿನ ಕೆಲಸ’’
- ಚಂದ್ರಹಾಸ ಸುವರ್ಣ, ಮೀನುಗಾರರು, ತೋಟಬೆಂಗ್ರೆ.
‘‘ಇಲಾಖೆ ನೀಡಿರುವ ಸೂಚನೆಯಂತೆ ನಮ್ಮ ಮೀನುಗಾರರು ಸುರಕ್ಷಿತ ಅಂತರದ ಸೇರಿದಂತೆ ಎಲ್ಲಾ ರೀತಿಯ ನಿಯಮಗಳನ್ನು ಪಾಲಿಸುತ್ತಿ ದ್ದೇವೆ. ಲಾಕ್‌ಡೌನ್‌ನಿಂದಾಗಿ ಬೋಟ್‌ಗಳು ನೀರಿಗಳಿಯದೆ ಮೀನುಗಾರರ ಜೀವನವೇ ಸ್ತಬ್ಧವಾಗಿತ್ತು. ನಮ್ಮಲ್ಲಿ ಬೋಟ್‌ಗಳಲ್ಲಿ ದುಡಿಯುವ ಕೆಲವೇ ಕೆಲವು ಒರಿಸ್ಸಾ, ಬಿಹಾರ ಮೂಲದ ಕಾರ್ಮಿಕರಿದ್ದಾರೆ. ಅವರು ಊರಿಗೂ ತೆರಳಲಾಗದೆ ಇಲ್ಲಿ ಸಂಕಷ್ಟದಲ್ಲಿದ್ದರು. ನಾವು ಕೂಡಾ ಕೆಲಸ ಇಲ್ಲದೆ ತೊಂದರೆಯಲ್ಲಿದ್ದರೂ ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದೆವು. ಇದೀಗ ಕೆಲ ದಿನಗಳಾದರೂ ಮೀನುಗಾರಿಕೆಗೆ ಅವಕಾಶ ದೊರಕಿರುವುದು ಕೊಂಚ ನೆಮ್ಮದಿ ದೊರಕಿದಂತಾಗಿದೆ’’
- ಇಸ್ಮಾಯಿಲ್, ಮೀನುಗಾರರು, ಉಳ್ಳಾಲ ಕೋಡಿ.
‘‘ಇಂದು ನಮ್ಮಲ್ಲಿ ಕೊಡ್ಡೆಯಿ, ನಂಗ್, ಮದಿಮಾಲ್, ಮಾಂಜಿ, ಸಿಗಡಿ, ಏಡಿ ಮೀನುಗಳು ದೊರಕಿವೆ. ಮೀನಿಗೆ ಉತ್ತಮ ಬೆಲೆ ಸಿಗಲಿಲ್ಲ. ಆದರೂ ಇದೀಗ ಹಲವು ದಿನಗಳ ಸ್ಥಗಿತದ ಬಳಿಕ ಜಿಲ್ಲಾಡಳಿತ ಅವಕಾಶ ನೀಡಿರುವುದು ನಾವು ಒಂದಷ್ಟು ನಿರಾಳರಾಗುವಂತಾಗಿದೆ’’
- ಜಯಾನಂದ ಬಂಗೇರ, ಮೀನುಗಾರರು, ಉಳ್ಳಾಲ.