×
Ad

'ಮೇ 18ರಿಂದ ಉಡುಪಿ ಜಿಲ್ಲೆಯ ಸೆಲೂನುಗಳ ಪ್ರಾರಂಭಕ್ಕೆ ಷರತ್ತುಬದ್ದ ಅನುಮತಿ'

Update: 2020-05-14 17:20 IST

ಉಡುಪಿ, ಮೇ 14: ಜಿಲ್ಲೆಯಾದ್ಯಂತದ ಸೆಲೂನುಗಳನ್ನು ಸೋಮವಾರ ಮೇ 18ರಿಂದ ಪುನರಾರಂಭಿಸಲು ಷರತ್ತುಬದ್ದ ಅನುಮತಿ ನೀಡುವುದಾಗಿ ಉಡುಪಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ ಭಂಡಾರಿ ಗುಡ್ಡೆಯಂಗಡಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೇ 13ರಂದು ಜಿಲ್ಲಾ ಸವಿತಾ ಸಮಾಜದ ನಿಯೋಗವೊಂದು ಜಿಲ್ಲಾಧಿಕಾರಿ ಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಸದ್ಯದ ಪರಿಸ್ಥಿತಿಗಳನ್ನು ವಿವರಿಸಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು ಮೇ 18ರಿಂದ ಜಿಲ್ಲೆಯಾದ್ಯಂತ ಎಲ್ಲಾ ಸೆಲೂನುಗಳ ಪುನರಾರಂಭಕ್ಕೆ ಷರತ್ತುಬದ್ದ ಅನುಮತಿ ನೀಡಿವುದಾಗಿ ತಿಳಿಸಿದ್ದಾರೆ ಎಂದವರು ಹೇಳಿದರು.

ಕೊರೋನ ಸಮಸ್ಯೆಯಿಂದ ಇಡೀ ದೇಶವೇ ತತ್ತರಿಸುತ್ತಿದ್ದಾಗ ಲಾಕ್‌ಡೌನ್ ಮಾಡುವ ಮೂರು ದಿನ ಮೊದಲೇ ಕ್ಷೌರಿಕ ಬಂಧುಗಳು ಅಂಗಡಿ ಗಳನ್ನು ಮುಚ್ಚಿ ಬೆಂಬಲವನ್ನು ಸೂಚಿಸಿದ್ದಾರೆ. ಲಾಕ್‌ಡೌನ್‌ನಿಂದ ಬಡ ಕ್ಷೌರಿಕ ಕುಟುಂಬ ಸಂಕಷ್ಟಕ್ಕೆ ಸಿಲುಕಿದಾಗ ಉದ್ಯಮಿ ಡಾ. ಜಿ.ಶಂಕರ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಮೂಲಕ ಜಿಲ್ಲೆಯ ಎಲ್ಲ ಕ್ಷೌರಿಕರಿಗೆ ಹಾಗೂ ಬಡ ಅರ್ಹ ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ಸಾಮಗ್ರಿಗಳುಳ್ಳ ಕಿಟ್‌ಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಇತ್ತೀಚೆಗೆ ರಾಜ್ಯ ಸರಕಾರ ಕ್ಷೌರಿಕರಿಗಾಗಿ 5 ಸಾವಿರ ರೂ. ಆರ್ಥಿಕ ನೆರವು ಘೋಷಿಸಿದ್ದು, ಇದು ಸಂಬಂಧಪಟ್ಟ ಇಲಾಖೆಯ ಮೂಲಕ ಆದಷ್ಟು ಶೀಘ್ರ ಇದು ಅರ್ಹರಿಗೆ ತಲುಪುವಂತಾಗಬೇಕು ಎಂದು ಅವರು ಮನವಿ ಮಾಡಿದರು.

ಷರತ್ತುಗಳು: ಗ್ರಾಹಕರು ದೂರವಾಣಿ ಮೂಲಕ ಸಮಯ ನಿಗದಿಪಡಿಸಿ ಕ್ಷೌರ ಮಾಡಿಸಲು ಬಂದರೆ ಉತ್ತಮ. ಯಾವುದೇ ಸೆಲೂನುಗಳು ಎಸಿ ಬಳಸುವಂತಿಲ್ಲ. ಗ್ರಾಹಕರು ಮತ್ತು ಕ್ಷೌರಿಕರ ಅಂತರವನ್ನು ಎರಡು ಫೀಟ್ ಕಡಿಮೆ ಇರದಂತೆ ಕಾಪಾಡಬೇಕು. ಸೆಲೂನ್‌ನಲ್ಲಿ ಬಳಸುವ ಬಟ್ಟೆಗಳು ಹಾಗೂ ಅಂಗಡಿಗಳು ಸ್ವಚ್ಛತೆ ಮತ್ತು ಶುಭ್ರತೆಯನ್ನು ಕಾಪಾಡಬೇಕು. ಗ್ರಾಹಕರಿಗೆ ಸೇವೆ ನೀಡುವಾಗ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್‌ಗಳನ್ನು ಧರಿಸಿರಬೇಕು. ಗ್ರಾಹಕರಿಗೆ ಸೇವೆ ನೀಡಿದ ಬಳಿಕ ಸಾಬೂನಿನಲ್ಲಿ ಕೈ ತೊಳೆಯ ಬೇಕು. ಗ್ರಾಹಕರು ಬಂದ ತತ್‌ಕ್ಷಣ ಅವರಿಗೆ ಸ್ಯಾನಿಟೈಸರ್‌ನಲ್ಲಿ ಕೈಯನ್ನು ಸ್ವಚ್ಛಗೊಳಿಸುವಂತೆ ತಿಳಿಸಬೇಕು. ಅಂಗಡಿಯಲ್ಲಿ ಇಬ್ಬರು ಕ್ಷೌರಿಕರು ಸೇವೆ ನೀಡಬೇಕು. ಈ ಕುರ್ಚಿಯ ಅಂತರವೂ ಒಂದು ಮೀ.ನಷ್ಟು ಇರಬೇಕು.

ಒಮ್ಮೆ ಗ್ರಾಹಕರಿಗೆ ಹಾಕಿದ ಬಟ್ಟೆಗಳನ್ನು ಮತ್ತೊಬ್ಬ ಗ್ರಾಹಕರಿಗೆ ಹಾಕುವಂತಿಲ್ಲ. ಬಟ್ಟೆಗಳು ಸ್ವಚ್ಛತೆಗೊಂಡ ಬಳಿಕವೇ ಉಪಯೋಗಿಸಬೇಕು. ಸವಿತಾ ಸಮಾಜದ ಪ್ರತಿಯೊಬ್ಬರೂ ಆರೋಗ್ಯ ಸೇತು ಆ್ಯಪ್‌ನ್ನು ಮೊಬೈಲಿಗೆ ಡೌನ್‌ಲೋಡ್ ಮಾಡಿಕೊಳ್ಳಬೇಕು. ವಾರದ ರಜೆ ಹಿಂದಿನಂತೆ ಮಂಗಳವಾರ ಕಡ್ಡಾಯವಾಗಿರುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ ಸಾಲ್ಯಾನ್ ಆದಿ ಉಡುಪಿ, ಗೌರವಾಧ್ಯಕ್ಷ ಗೋವಿಂದ ಭಂಡಾರಿ, ಉಡುಪಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜು ಸಿ.ಭಂಡಾರಿ ಕಿನ್ನಿಮೂಲ್ಕಿ, ಜಿಲ್ಲಾ ಸಂಘಟನ ಕಾರ್ಯದರ್ಶಿ ಯು.ಶಂಕರ್ ಸಾಲ್ಯಾನ್ ಕಟಪಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News