ಲಾಕ್‌ಡೌನ್‌ನಲ್ಲಿ ಕೇರಳದಲ್ಲಿ ಬಾಕಿಯಾದ ಬೋಟು ಉಡುಪಿ ಜಿಲ್ಲೆಯತ್ತ
ಉಡುಪಿ, ಮೇ 14: ಕೊರೋನ ವಿರುದ್ಧ ಲಾಕ್‌ಡೌನ್ ಹೇರುವ ವೇಳೆ ಕೇರಳದ ಚರವತ್ತೂರು, ಚೊಂಬಲ್ ಹಾಗೂ ಕಣ್ಣೂರುಗಳಲ್ಲಿ ಸಿಕ್ಕಿಹಾಕಿ ಕೊಂಡಿದ್ದ ಉಡುಪಿ ಜಿಲ್ಲೆಯ 41 ಬೋಟುಗಳನ್ನು ಮರಳಿ ಜಿಲ್ಲೆಗೆ ಕರೆತರಲು ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಸಚಿವರು, ಕೇರಳದಲ್ಲಿ ಸಿಕ್ಕಿಹಾಕಿಕೊಂಡಿರುವ ಜಿಲ್ಲೆಯ 41 ಬೋಟುಗಳ ಕುರಿತು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರೊಂದಿಗೆ ಚರ್ಚಿಸಿದ್ದು, ಕೇರಳ ಸರಕಾರದ ಜೊತೆ ಸಂಪರ್ಕ ಬೆಳೆಸಿ, ಎರಡು ರಾಜ್ಯಗಳ ನಡುವಿನ ಒಪ್ಪಂದದಂತೆ ಇಂದು ಅಪರಾಹ್ನ ಬೋಟುಗಳನ್ನು ಮರಳಿ ತರಲು, ಮಾಲಕರು ಹಾಗೂ ಇತರರು ಮೂರು ವಿಶೇಷ ಯಾಂತ್ರೀಕೃತ ಬೋಟುಗಳ ಮೂಲಕ ತೆರಳಿದ್ದಾರೆ.
ಇದಕ್ಕಾಗಿ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಪ್ರಯಾಣ ವೆಚ್ಚ ಭರಿಸಲು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದರಿಂದ ಸಂಕಷ್ಟದಲ್ಲಿ ಸಿಲುಕಿರುವ 41 ಯಾಂತ್ರೀಕೃತ ಬೋಟುಗಳ ಮೀನುಗಾರರಿಗೆ ಸಹಕಾರಿ ಯಾಗಲಿದೆ.