ಕೊಂಕಣ ರೈಲ್ವೆಯಿಂದ ಮತ್ತೊಂದು ಪಾರ್ಸೆಲ್ ವಿಶೇಷ ರೈಲು
ಉಡುಪಿ, ಮೇ 14: ಪಶ್ಚಿಮ ರೈಲ್ವೆಯ ಸಹಯೋಗದೊಂದಿಗೆ ಕೊಂಕಣ ರೈಲ್ವೆ ಓಕಾ ಹಾಗೂ ತಿರುವನಂತಪುರಂ ನಡುವೆ ಮತ್ತೊಂದು ವಿಶೇಷ ಪಾರ್ಸೆಲ್ ರೈಲನ್ನು ಓಡಿಸುತ್ತಿದೆ. ಇದರಲ್ಲಿ ಅಗತ್ಯ ವಸ್ತುಗಳು ಇರುತ್ತವೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ನಂ. 00933 ಓಕಾ-ತಿರುವನಂತಪುರಂ ಸೆಂಟ್ರಲ್ ಪಾರ್ಸೆಲ್ ವಿಶೇಷ ರೈಲು ಮೇ 14ರಂದು ಅಪರಾಹ್ನ 1.:10ಕ್ಕೆ ಓಕಾದಿಂದ ಪ್ರಯಾಣ ಪ್ರಾರಂಭಿಸಿದ್ದು, ಮೇ 16ರಂದು ಅಪರಾಹ್ನ 12 ಗಂಟೆಗೆ ತಿರುವನಂತಪುರಂ ಸೆಂಟ್ರಲ್ ತಲುಪಲಿದೆ. ಮರು ಪ್ರಯಾಣದಲ್ಲಿ ರೈಲು ನಂ.00934 ತಿರುವನಂತಪುರಂ ಸೆಂಟ್ರಲ್‌ನಿಂದ ರಾತ್ರಿ 11 ಕ್ಕೆ ಪ್ರಯಾಣ ಬೆಳೆಸಲಿದ್ದು, 18ರಂದು ರಾತ್ರಿ 9:40ಕ್ಕೆ ಓಕಾ ತಲುಪಲಿದೆ.
ರೈಲು ತನ್ನ ಪ್ರಯಾಣದ ವೇಳೆ ಮೇ 15ರ ರಾತ್ರಿ 9:10ಗಂಟೆಗೆ ಹಾಗೂ ಮರುಪ್ರಯಾಣದಲ್ಲಿ ಮೇ 17ರ ಅಪರಾಹ್ನ 1:20ಕ್ಕೆ ಉಡುಪಿ ನಿಲ್ದಾಣಕ್ಕೆ ಆಗಮಿಸಲಿದೆ. ರೈಲಿಗೆ ಜಾಮ್‌ನಗರ, ರಾಜ್‌ಕೋಟ್, ಸುರೇಂದ್ರನಗರ, ಅಹ್ಮದಾಬಾದ್, ಆನಂದ್, ವಡೋದರ, ಬರುಚಾ, ಸೂರತ್, ವಾಸೈ ರೋಡ್, ಪನ್ವೇಲ್, ರೋಹಾ, ರತ್ನಗಿರಿ, ಕನಕವಾಲಿ, ಮಡಗಾಂವ್ ಜಂಕ್ಷನ್, ಉಡುಪಿ, ಮಂಗಳೂರು ಜಂಕ್ಷನ್, ಕಣ್ಣೂರು, ಕಲ್ಲಿಕೋಟೆ, ಶೋರನೂರ್ ಜಂಕ್ಷನ್, ತ್ರಿಶೂರ್, ಎರ್ನಾಕುಲಂ ನಗರ, ಕೊಟ್ಟಾಯಂ ಹಾಗೂ ಕೊಟ್ಟಾಯಂ ಜಂಕ್ಷನ್‌ಗಳಲ್ಲಿ ವ್ಯವಹಾರದ ನಿಲುಗಡೆಯನ್ನು ಹೊಂದಿರುತ್ತದೆ.
ಈ ಪಾರ್ಸೆಲ್ ರೈಲಿನಲ್ಲಿ ತಮ್ಮ ಯಾವುದೇ ವಸ್ತುಗಳ ಪಾರ್ಸೆಲ್‌ಗಳನ್ನು ಕಳುಹಿಸಲು ಇಚ್ಛಿಸುವವರು ಕೊಂಕಣ ರೈಲ್ವೆಯ ರತ್ನಗಿರಿ, ಕನಕ ವಾಲಿ, ಮಡಂಗಾವ್ ಹಾಗೂ ಉಡುಪಿ ನಿಲ್ದಾಣಗಳಲ್ಲಿರುವ ಪಾರ್ಸೆಲ್ ಕಚೇರಿಗಳನ್ನು ಸಂಪರ್ಕಿಸುವಂತೆ ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.