×
Ad

ಕೋಡಿ ಕನ್ಯಾಣ ಜಟ್ಟಿ ಹೂಳೆತ್ತುವ ಕಾಮಗಾರಿ ಪ್ರಗತಿ ಪರಿಶೀಲನೆ

Update: 2020-05-14 17:52 IST

ಉಡುಪಿ, ಮೇ 14: ಸಾಸ್ತಾನ ಬಳಿಯ ಕೋಡಿ ಕನ್ಯಾಣ ಕಿರುಬಂದರು ಜಟ್ಟಿಯಹೂಳೆತ್ತುವ ಕಾಮಗಾರಿಯ ಪ್ರಗತಿ ಪರಿಶೀಲನೆಗೆ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬೆಂಗಳೂರಿನಲ್ಲಿ ಸಂಬಂಧಿತ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದರು.

ಈ ಕಿರುಬಂದರಿನ ಜಟ್ಟಿ ಪ್ರದೇಶದ ಹೂಳೆತ್ತುವ ಬಗ್ಗೆ ಸ್ಥಳೀಯರು ಬಹು ಕಾಲದಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಸರಕಾರವೂ ಹೂಳೆತ್ತುವ ಗುತ್ತಿಗೆಯನ್ನು ಕಂಪೆನಿಯೊಂದಕ್ಕೆ ನೀಡಿತ್ತು. ಆದರೆ ಹೂಳೆತ್ತುವ ಕಾಮಗಾರಿ ವಿರುದ್ಧ ಚೆನ್ನೈನ ರಾಷ್ಟ್ರೀಯ ಹಸಿರು ಪೀಠದಲ್ಲಿ ದಾವೆ ದಾಖಲಾಗಿರುವ ಹಿ್ನೆಲೆಯಲ್ಲಿ ಕೆಲಸ ಸ್ಥಗಿತಗೊಂಡಿತ್ತು.

ಐರೋಡಿಯ ಸ್ಥಳೀಯರೊಬ್ಬರು ರಾಷ್ಟ್ರೀಯ ಹಸಿರು ಪೀಠದಲ್ಲಿ ಹಾಕಿದ ದಾವೆ ಅನ್ವಯ ಸರಕಾರದ ಪರವಾಗಿ ನ್ಯಾಯವಾದಿಗಳ ನೇಮಕವೂ ಸೇರಿದಂತೆ ವ್ಯಾಜ್ಯ ನಿರ್ವಹಣಾ ಅಧಿಕಾರಿಗಳು ನೀಡಿದ ಮಾಹಿತಿಯ ವಿವರಗಳನ್ನು ಸಭೆ ಪರಾಮರ್ಶಿಸಿತು.

ಕೋಡಿ ಕನ್ಯಾಣದ ಹೂಳೆತ್ತುವ ಕಾಮಗಾರಿ, ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಮೂಲಕ ಅನುಷ್ಠಾನಗೊಳ್ಳುತ್ತಿದ್ದು, ಕೋಡಿ ಗ್ರಾಮದ ಸೇತುವೆ ಬಳಿ ಹೂಳೆತ್ತಿದ ಮರಳನ್ನು ಶೇಖರಿಸಿದ ಹಿನ್ನೆಲೆಯಲ್ಲಿ ದಾವೆಯನ್ನು ಹಸಿರು ಪೀಠದಲ್ಲಿ ಹೂಡಲಾಗಿತ್ತು. ಇದರಿಂದ ಕಾಮಗಾರಿ ಕುಂಠಿ ತವಾಗಿದ್ದು, ಮೀನುಗಾರರ ಯಾಂತ್ರಿಕ ದೋಣಿಗಳನ್ನು ಮೇಲಕ್ಕೆ ತರಲಾಗದೆ ಅಪಾರ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರರ ಅನುಕೂಲಕ್ಕಾಗಿ, ನಿಂತಿರುವ ಹೂಳೆತ್ತುವ ಕಾಮಗಾರಿಯನ್ನು ಮುಂದುವರಿಸಲು ಅಗತ್ಯ ಕ್ರಮವನ್ನು ತುರ್ತಾಗಿ ತೆಗೆದುಕೊಳ್ಳುವಂತೆ ಸಚಿವ ಕೋಟ ಅಧಿಕಾರಿಗಳಿಗೆ ಸೂಚಿಸಿದರು.

ಉಡುಪಿ ಜಿಲ್ಲೆಯ ಹೆಜಮಾಡಿ ಬಂದರು ನಿರ್ಮಾಣ, ಗಂಗೊಳ್ಳಿ ಜಟ್ಟಿ ದುರಸ್ತಿ ಕಾಮಗಾರಿ, ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಜಟ್ಟಿ ವಿಸ್ತರಣೆ ಕಾಮಗಾರಿ, ಹಂಗಾರಕಟ್ಟೆಯ ರೂ. 130 ಕೋಟಿ ಅಂದಾಜು ವೆಚ್ಚದ ಬಂದರು ಅಭಿವೃದ್ಧಿ ಕಾಮಗಾರಿಯೂ ಸೇರಿದಂತೆ ಮರವಂತೆ, ಕೊಡೇರಿ ಮೀನುಗಾರಿಕೆ ಬಂದರಿನ ಅಭಿವೃದ್ಧಿ ಕಾಮಗಾರಿ ಕುರಿತು ಸಭೆ ಸುದೀರ್ಘ ಚರ್ಚೆ ನಡೆಸಿತು.

ಕೋಡಿ ಕನ್ಯಾಣದ ಹೂಳೆತ್ತುವ ಕಾಮಗಾರಿ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ಸಭೆಯಲ್ಲಿ ಸಚಿವರಿಗೆ ತಿಳಿಸಿದರು.

ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಗೋಗಿ, ಮೀನುಗಾರಿಕೆ ಇಲಾಖೆಯ ನಿರ್ದೇಶಕರಾದ ಪ್ರಭುಲಿಂಗ ಕವಳಕಟ್ಟಿ ಹಾಗೂ ಸಚಿವರ ಆಪ್ತ ಕಾರ್ಯ ದರ್ಶಿ ಡಾ. ಉದಯ ಕುಮಾರ ಶೆಟ್ಟಿ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News