×
Ad

ಬೆಂಬಲ ಬೆಲೆಯಲ್ಲಿ ಸರಕಾರ ಕೊಬ್ಬರಿ ಖರೀದಿಸಲಿ: ಕೃಷಿಕ ಸಂಘ

Update: 2020-05-14 17:53 IST

ಉಡುಪಿ, ಮೇ 14: ಜಿಲ್ಲೆಯ ಬಹುಸಂಖ್ಯಾತ ರೈತರು ಇತರ ಬೆಳೆಗಳೊಂದಿಗೆ ತೆಂಗು ಬೆಳೆಯನ್ನು ಬೆಳೆಯುತಿದ್ದು, ಇದೀಗ ಜಿಲ್ಲೆಯಲ್ಲಿ ಕೊಬ್ಬರಿಗೆ ಬೇಡಿಕೆ ಇದ್ದರೂ, ದರ ಕುಸಿತದಿಂದ ತೆಂಗು ಬೆಳೆಗಾರರು ತೀವ್ರವಾದ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇದಕ್ಕಾಗಿ ಸರಕಾರ ಬೆಂಬಲ ಬೆಲೆಯಲ್ಲಿ ಕೊಬ್ಬರಿಯನ್ನು ಖರೀದಿಸಲು ಮುಂದಾಗಿ ರೈತರ ರಕ್ಷಣೆಗೆ ಬರಬೇಕು ಎಂದು ಉಡುಪಿಲ ಜಿಲ್ಲಾ ಕೃಷಿಕ ಸಂಘ ಒತ್ತಾಯಿಸಿದೆ.

ಲಾಕ್‌ಡೌನ್‌ನಿಂದಾಗಿ ತೊಂದರೆಗೀಡಾದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರು ವುದರಿಂದ ಸಮಗ್ರವಾಗಿ ಅಲ್ಲದಿದ್ದರೂ ಕೆಲವು ವರ್ಗದ ಕೃಷಿಕರಿಗೆ ಪ್ರಯೋಜನವಾಗಲಿದೆ. ಆದರೆ ಅತೀಹೆಚ್ಚು ತೆಂಗು ಬೆಳೆಗಾರರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಬೇಡಿಕೆ ಇಲ್ಲದ ಕಾಲದಲ್ಲೂ ಕೊಬ್ಬರಿ ಕಿಲೋ ಒಂದರ ದರ 105ರೂ. ಇದ್ದದ್ದು ಈಗ ಏಕಾಏಕಿ 94ರೂ.ಗೆ ಇಳಿದಿದೆ. ಈ ದರ ಇನ್ನೂ ಕುಸಿಯು ವುದರಲ್ಲಿದೆ. ಆದ್ದರಿಂದ ರಾಜ್ಯ ಸರಕಾರವು ತೆಂಗು ಬೆಳೆಗಾರರ ರಕ್ಷಣೆಗೆ ಮುಂದಾಗಬೇಕಾಗಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘ ಮುಖ್ಯಮಂತ್ರಿ ಸಹಿತ ಜಿಲ್ಲೆಯ ಎಲ್ಲಾ ಶಾಸಕರುಗಳನ್ನು ವಿನಂತಿಸಿದೆ.

ಸರಕಾರ ಕೊಬ್ಬರಿಗೆ ಕಿಲೋ ಒಂದಕ್ಕೆ ಕನಿಷ್ಠ 125ರೂ.ಗಳ ಬೆಂಬಲ ಬೆಲೆ ಘೋಷಿಸುವುದಲ್ಲದೆ, ಖರೀದಿಸುವ ವ್ಯವಸ್ಥೆಯನ್ನು ಕೂಡಾ ತಕ್ಷಣದಲ್ಲಿ ಮಾಡಬೇಕು ಎಂದು ಕೃಷಿಕ ಸಂಘ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News