ಕಾಸರಗೋಡು ಜಿಲ್ಲೆಯಲ್ಲಿ ಇಂದು 10 ಮಂದಿಗೆ ಕೊರೋನ ಪಾಸಿಟಿವ್
ಕಾಸರಗೋಡು: ಜಿಲೆಯಲ್ಲಿ ಗುರುವಾರ 10 ಮಂದಿಗೆ ಕೊರೋನ ಸೋಂಕು ಖಚಿತಗೊಂಡಿದೆ. ಇವರಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರೂ ಸೇರಿದ್ದಾರೆ.
ಪೈವಳಿಕೆ ನಿವಾಸಿ 50 ವರ್ಷ ಪ್ರಾಯದ ವ್ಯಕ್ತಿ, 35 ವರ್ಷ ಪ್ರಾಯದ ಅವರ ಪತ್ನಿ, 11 ಮತ್ತು 8 ವರ್ಷ ಪ್ರಾಯದ ಅವರ ಗಂಡುಮಕ್ಕಳಿಗೆ ಕೊರೋನ ಸೋಂಕು ಖಚಿತಗೊಂಡಿದೆ. ಕಾಸರಗೋಡು ನಗರಸಭೆ ವ್ಯಾಪ್ತಿಯ 65 ವರ್ಷ ಪ್ರಾಯದ ವ್ಯಕ್ತಿ, ಕಳ್ಳಾರ್ ನಿವಾಸಿ 26 ವರ್ಷದ ವ್ಯಕ್ತಿ, ಕುಂಬಳೆ ನಿವಾಸಿಗಳಾದ 58, 31 ವರ್ಷದ ವ್ಯಕ್ತಿಗಳು, ಕಾಸರಗೋಡು ಜನರಲ್ ಆಸ್ಪತ್ರೆಯ ಒಬ್ಬ ಕಾರ್ಯಕರ್ತ ಮತ್ತು ಜಿಲ್ಲಾ ಆಸ್ಪತ್ರೆಯ ಒಬ್ಬ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಖಚಿತಗೊಂಡಿದೆ.
ಪೈವಳಿಕೆ ನಿವಾಸಿಗಳು ಮೇ 4ರಂದು ಮಹಾರಾಷ್ಟ್ರದಿಂದ ಬಂದಿದ್ದರು. ಕುಂಬಳೆ ನಿವಾಸಿಗಳಿಬ್ಬರು ಕೂಡ ಮಹಾರಾಷ್ಟ್ರದಿಂದ ಬಂದವರು. ಇವರಲ್ಲಿ 58 ವರ್ಷ ವ್ಯಕ್ತಿ ಹೃದ್ರೋಗಿ ಮತ್ತು ಸಿಹಿಮೂತ್ರ ರೋಗಿಯೂ ಆಗಿದ್ದಾರೆ. ಕಾಸರಗೋಡು ನಗರಸಭೆ ವ್ಯಾಪ್ತಿಯ ವ್ಯಕ್ತಿ ಮಲಪ್ಪುರಂನ ಮಂಜೇರಿಯಿಂದ ಬಂದಿದ್ದರು. ಕಳ್ಳಾರ್ ನಿವಾಸಿ ಬೆಂಗಳೂರಿನಿಂದ ಬಂದಿದ್ದರು.
ಇವರಲ್ಲಿ ಒಬ್ಬರು ಪರಿಯಾಂ ವೈದ್ಯಕೀಯ ಕಾಲೇಜಿನಲ್ಲಿ ಮತ್ತು ಇತರರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು. ಇತರ ರಾಜ್ಯಗಳಿಂದ ಆಗಮಿಸಿದ ಕೆಲವರಿಂದ ರೋಗ ಹರಡುವಿಕೆ ನಡೆದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚುವರಿ ಜಾಗ್ರತೆ ಪಾಲಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
ಇತರ ರಾಜ್ಯಗಳಿಂದ ಆಗಮಿಸಿದವರು ರೂಂ ಕ್ವಾರೆಂಟೈನ್ ನಲ್ಲಿದ್ದಾರೆ ಎಂಬ ಬಗ್ಗೆ ಅವರ ಕುಟುಂಬದ ಸದಸ್ಯರು ಮತ್ತು ಜಾಗೃತಿ ಸಮಿತಿಗಳು ಖಚಿತತೆ ನಡೆಸಬೇಕು. ಇವರಲ್ಲಿ ಯಾವುದೇ ರೋಗ ಲಕ್ಷಣ ಕಂಡುಬಂದಲ್ಲಿ ತಕ್ಷಣ ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 1428 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 1,211 ಮಂದಿ, 217 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಗುರುವಾರ 35 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 89 ಮಂದಿ ಗುರುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ 5215 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 4928 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 47 ಮಂದಿಯ ಫಲಿತಾಂಶ ಇನ್ನೂ ಲಭಿಸಿಲ್ಲ.