×
Ad

ಬಿಆರ್‌ಎಸ್ ಸೂಪರ್ ‌ಸ್ಪೆಷಾಲಿಟಿ ಆಸ್ಪತ್ರೆ: ಕಾನೂನುಬದ್ಧವಿದ್ದರೆ ಒಂದೇ ದಿನದಲ್ಲಿ ಅನುಮತಿ- ಶಾಸಕ ರಘುಪತಿ ಭಟ್

Update: 2020-05-14 20:16 IST

ಉಡುಪಿ, ಮೇ 14: ನಗರದಲ್ಲಿ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಿ, ಉಚಿತವಾಗಿ ನಿರ್ವಹಿಸುವುದಕ್ಕೆ ಪ್ರತಿಯಾಗಿ ಬಿಆರ್‌ಎಸ್ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆ ನಿರ್ಮಿಸುವ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೀಲನಕ್ಷೆ ಕಾನೂನುಬದ್ಧವಾಗಿದ್ದರೆ ಅದಕ್ಕೆ ಒಂದೇ ದಿನದಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಲಾಗುವುದು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಇಂದು ಸಂಜೆ ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಬಿಆರ್‌ಎಸ್ ಆಸ್ಪತ್ರೆಯ ಕುರಿತಂತೆ ಪತ್ರಿಕೆಗಳಲ್ಲಿ ಬಂದ ವರದಿಗಳಿಗೆ ಸಂಸ್ಥೆ ನೀಡಿದ ಸ್ಪಷ್ಟೀಕರಣಕ್ಕೆ ತನ್ನ ಪ್ರತಿಕ್ರಿಯೆಯನ್ನು ನೀಡಿದರು. ಆಸ್ಪತ್ರೆಯ ವಿಷಯದಲ್ಲಿ ಬಿ.ಆರ್.ಶೆಟ್ಟಿ ಅವರ ಯಾವುದೇ ಒತ್ತಡ ಮತ್ತು ಬ್ಲಾಕ್‌ಮೇಲ್ ತಂತ್ರಕ್ಕೆ ಸರಕಾರ ಮಣಿಯಬಾರದು ಎಂದವರು ನುಡಿದರು.

ನಗರದಲ್ಲಿ ನಿರ್ಮಿಸುವ ಯಾವುದೇ ಕಟ್ಟಡಕ್ಕೆ ಮೂರು ನೆಲ ಅಂತಸ್ತಿನ ಕಟ್ಟಡ ನಿರ್ಮಾಣ ಕಾನೂನುಬಾಹಿರವಾಗಿದೆ. ಸಿಝಡ್‌ಆರ್ ನಿಯಮ ಪ್ರಕಾರ ಬಹುಮಹಡಿ ಕಟ್ಟಡಗಳಿಗೆ ಕೇವಲ 2 ನೆಲ ಅಂತಸ್ತಿಗೆ ಮಾತ್ರ ಅವಕಾಶವಿದೆ. ಹೀಗಾಗಿ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮುಂಭಾಗದಲ್ಲಿ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮತಿಯನ್ನು ನೀಡಲಾಗಿಲ್ಲ. ಬಿಆರ್‌ಎಸ್ ಸಂಸ್ಥೆ ಕಾನೂನು ಬದ್ಧವಾಗಿ ಅರ್ಜಿ ಸಲ್ಲಿಸಿದರೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೇವಲ ಒಂದು ದಿನದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಪತ್ರದಲ್ಲಿ ಸ್ಪಷ್ಟ ಉಲ್ಲೇಖ: ಬಿಆರ್‌ಎಸ್ ಸಂಸ್ಥೆ ಕಳೆದ ತಿಂಗಳು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರಕ್ಕೆ ಹಸ್ತಾಂತರ ಮಾಡುವ ಬಗ್ಗೆ ಎಂಬುದಾಗಿ ಸ್ಪಷ್ಟವಾಗಿ ಉಲ್ಲೇಖಿಸಿದೆ ಎಂದು ಅವರು ನುಡಿದರು.

ಎಂಒಯು ಆಗಿ ಮೂರು ವರ್ಷ ಕಳೆದರೂ ಬಿಆರ್‌ಎಸ್ ಸಂಸ್ಥೆಗೆ ರಾಜ್ಯ ಸರಕಾರದೊಂದಿಗೆ ನಿರ್ಧಾರಕ ಒಪ್ಪಂದಕ್ಕೆ (ಡೆಫಿನೆಟಿವ್ ಅಗ್ರಿಮೆಂಟ್) ಸಹಿ ಹಾಕಲು ಸಾಧ್ಯವಾಗಿಲ್ಲ. ಇದಕ್ಕೆ ಜಿಲ್ಲಾಡಳಿತ ಅಥವಾ ಸ್ಥಳೀಯ ಸಂಸ್ಥೆಗಳು ಕಾರಣವಲ್ಲ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಸೂಚಿತವಾಗಿ (ರೆಫರಲ್) ಬರುವ ರೋಗಿಗಳಿಗೆ ಹೊಸ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಬೇಕು ಎಂಬ ಸರಕಾರದ ಶರತ್ತಿಗೆ ಸಂಸ್ಥೆ ಒಪ್ಪಿಗೆ ಸೂಚಿಸದಿರುವುದೇ ಒಪ್ಪಂದ ನೆನೆಗುದಿಗೆ ಬೀಳಲು ಕಾರಣವಾಗಿದೆ ಎಂದವರು ಸ್ಪಷ್ಟಪಡಿಸಿದರು.

ಬಿಆರ್‌ಎಸ್ ಸಂಸ್ಥೆ ಸಮ್ಮಿಶ್ರ ಸರಕಾರದ ಅವಧಿಯಲ್ಲಿ, ಸರಕಾರದ ಜೊತೆ ಅಂತಿಮ ಒಪ್ಪಂದ ಆಗುವ ಮೊದಲೇ ರಾತ್ರೋರಾತ್ರಿ ಅಧಿಕಾರಿಗಳ ಮೇಲೆ ಒತ್ತಡ ತಂದು, ಹಳೆ ಆಸ್ಪತ್ರೆ ಕಟ್ಟಡವನ್ನು ಕೆಡವಿ ಮೂರು ಅಂತಸ್ತುಗಳಷ್ಟು ಆಳಕ್ಕೆ ಗುಂಡಿ ತೋಡಿದ್ದಾರೆ. ಇದು ಜವಾಬ್ದಾರಿಯುತ ನಡೆಯಲ್ಲ. 150 ಕೋಟಿ ರೂ. ಬೆಲೆಬಾಳುವ ಸರಕಾರಿ ಆಸ್ತಿಯನ್ನು ಸೇವೆಯ ಬದಲು ಉದ್ಯಮಕ್ಕೆ ಬಳಸಿ ಕೊಳ್ಳಲು ಜನಪ್ರತಿನಿಧಿಗಳು ಅವಕಾಶ ನೀಡುವುದಿಲ್ಲ ಎಂದರು.

ಹಿಂದಿನ ಸರಕಾರಿ ಮಹಿಳಾ ಆಸ್ಪತ್ರೆ ಸುಸಜ್ಜಿತವಾಗಿತ್ತು. ರೋಗಿಗಳು ತುಂಬ ಪ್ರಯೋಜನ ಪಡಕೊಳ್ಳುತಿದ್ದರು. ಅದನ್ನು ಕೆಡವಿ ಹಾಕಲಾಗಿದೆ. ಸರಕಾರಕ್ಕೆ ಆಸ್ಪತ್ರೆಯನ್ನು ವಾಪಸ್ ಬಿಟ್ಟು ಕೊಡುವುದೇ ಆದರೆ ಹಿಂದಿನಂತೆ ಮಣ್ಣು ತುಂಬಿಸಿ ಹಿಂದಿನ ರೀತಿಯಲ್ಲಿ ಪುನರ್ ನಿರ್ಮಿಸಿ ಕೊಡಲಿ. ನಾವು ವಾಪಸ್ ತೆಗೆದುಕೊಳ್ಳಲು ಸಿದ್ಧರಿದ್ದೇವೆ. ಅದು ಬಿಟ್ಟು ಇದ್ದಂತ ಆಸ್ಪತ್ರೆಯನ್ನು ಕೆಡವಿ ಗುಂಡಿ ತೋಡಿಟ್ಟು ಒಂದು ಕಡೆ ರೋಗಿಗಳನ್ನು ತೋರಿಸಿ ಇನ್ನೊಂದು ಕಡೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬ್ಲಾಕ್‌ಮೇಲ್ ದಂಧೆಗೆ ಇಳಿಯಲು ಅವಕಾಶ ನೀಡುವುದಿಲ್ಲ ಎಂದು ಶಾಸಕರು ಹೇಳಿದರು.

ಹಾಜಿ ಅಬ್ದುಲ್ಲ ಸಾಹೇಬರು ಕಟ್ಟಿದಂತಹ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉತ್ತಮ ಸ್ಥಿತಿಯಲ್ಲಿತ್ತು. ರೋಗಿಗಳಿಗೂ ಅನುಕೂಲವಾಗಿತ್ತು. ಅಂತಹ ಕಟ್ಟಡವನ್ನು ಒಪ್ಪಂದಕ್ಕೆ ಸಹಿ ಹಾಕುವ ಮೊದಲೇ ಕೆಡವಿದ್ದು ಯಾಕೆ ಎಂಬ ಪ್ರಶ್ನೆಗೆ ಬಿ.ಆರ್ ಶೆಟ್ಟಿ ಉತ್ತರವನ್ನು ನೀಡಬೇಕು ಎಂದು ಆಗ್ರಹಿಸಿದರು.

ಸರಕಾರಿ ಯುನಿಟ್ ಬೇಕು: 200 ಬೆಡ್‌ಗಳ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ಹಿಂದೆ ಇದ್ದಂತೆ, ಸರಕಾರಿ ವೈದ್ಯರು, ದಾದಿಯರನ್ನು ಒಳಗೊಂಡ 70 ಬೆಡ್‌ಗಳ ಯುನಿಟ್ ರಚಿಸಬೇಕು. ಹಿರಿಯ ಸರಕಾರಿ ಸ್ತ್ರೀರೋಗ ತಜ್ಞರು ವೈದ್ಯಕೀಯ ಅಧೀಕ್ಷಕರಾಗಿರಬೇಕು. ಜಿಲ್ಲಾ ಮೇಲುಸ್ತವಾರಿ ಸಮಿತಿಯಲ್ಲಿ ಜನಪ್ರತಿನಿಧಿಯೊಬ್ಬರನ್ನು ಸದಸ್ಯರಾಗಿ ಸೇರಿಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ರಘುಪತಿ ಭಟ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News