×
Ad

ಕಾಸರಗೋಡು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ ವಿರುದ್ಧ ಪ್ರಕರಣ ದಾಖಲು

Update: 2020-05-14 21:36 IST

ಮಂಗಳೂರು, ಮೇ 14: ನರಿಂಗಾನ ಗ್ರಾಮದ ನೆತ್ತಿಲಪದವು ಎಂಬಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಕಾಸರಗೋಡು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಸರಗೋಡು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಮೇ 12ರಂದು ರಾತ್ರಿ ಉಳ್ಳಾಲ ಠಾಣೆಯ ಎಎಸ್ಸೈ ಶೇಖರ ಗಟ್ಟಿ ಎಂಬವರು ಮೇಲಾಧಿಕಾರಿಗಳ ಆದೇಶದಂತೆ ಇತರ ಸಿಬ್ಬಂದಿಯೊಂದಿಗೆ ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ನೆತ್ತಿಲಪದವು ಎಂಬಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ತೌಡುಗೋಳಿ ಕಡೆಯಿಂದ ನೆತ್ತಿಲಪದವು ಕಡೆಗೆ ಬರುತ್ತಿದ್ದ ಕಾರನ್ನು ತಡೆದು ನಿಲ್ಲಿಸಿದ್ದು, ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಕರಿದ್ದರು. ಹೀಗಾಗಿ ತಪಾಸಣೆಗೆ ಮುಂದಾದ ಪೊಲೀಸರು ದ.ಕ. ಜಿಲ್ಲಾಧಿಕಾರಿಗಳ ಲಾಕ್‌ಡೌನ್ ಆದೇಶವಿರುವ ಬಗ್ಗೆ ತಿಳಿಸಿದ್ದು, ಈ ವೇಳೆ ಹರ್ಷಾದ್ ವರ್ಕಾಡಿ ಪೊಲೀಸರ ಜೊತೆ ಉದ್ದಟತನ ತೋರಿದ್ದಾರೆ ಎಂದು ದೂರಲಾಗಿದೆ.

ಕಾರಿನ ಹಿಂದಿನ ಸೀಟಿನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಇಬ್ಬರೂ ಸೇರಿ ಕಾರಿನಿಂದ ಏಕಾಏಕಿಯಾಗಿ ಇಳಿದು ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪಿಸಿ 478ನೇ ಕಲ್ಲಪ್ಪ ಮತ್ತು ಪಿಸಿ 2292ನೇ ಮಂಜುನಾಥ ಎಂಬವರನ್ನು ಗದರಿಸಿ ಉಡಾಫೆ ಮಾತನಾಡಿ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿದ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 

ಈ ಬಗ್ಗೆ ಉಳ್ಳಾಲ ಠಾಣೆಯ ಎಎಸ್ಸೈ ಶೇಖರ ಗಟ್ಟಿ ಎಂಬವರ ದೂರಿನಂತೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News