ಕೊರೋನಕ್ಕೆ ಬಲಿಯಾದ ಐವರಿಗೂ ಪಡೀಲ್ ಆಸ್ಪತ್ರೆಯೇ ಲಿಂಕ್ !
ಮಂಗಳೂರು, ಮೇ 14: ದ.ಕ. ಜಿಲ್ಲೆಯಲ್ಲಿ ಗುರುವಾರ ಕೊರೋನ ಪಾಸಿಟಿವ್‌ನಿಂದ 80 ವರ್ಷದ ವೃದ್ಧೆ ಕೊನೆಯುಸಿರೆಳೆಯುವುದರೊಂದಿಗೆ ಐದು ಮಂದಿ ಮೃತಪಟ್ಟಂತಾಗಿದೆ. ಈ ಐವರು ಮಹಿಳೆಯರೇ ಆಗಿದ್ದು, ಎಲ್ಲಾ ಪ್ರಕರಣಗಳಿಗೂ ಪಡೀಲ್‌ನ ಖಾಸಗಿ ಆಸ್ಪತ್ರೆಯೇ ಲಿಂಕ್ ಆಗಿರುವುದು ಗಮನಾರ್ಹ.
ಎ.19ರಂದು 45 ವರ್ಷದ ಮಹಿಳೆ ಮತ್ತು ಎ. 23ರಂದು 75 ವರ್ಷ ಪ್ರಾಯದ ವೃದ್ಧೆ ಹಾಗೂ ಎ.30ರಂದು 67 ವರ್ಷ ಪ್ರಾಯದ ವೃದ್ಧೆ ಮೃತಪಟ್ಟಿದ್ದರು. ಇವರು ಮೂವರೂ ಬಂಟ್ವಾಳ ತಾಲೂಕಿನವನರಾಗಿದ್ದರು. ಮೇ 13ರಂದು 58 ವರ್ಷ ಪ್ರಾಯದ ಮಹಿಳೆ ಹಾಗೂ ಮೇ 14ರಂದು 80 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಇವರಿಬ್ಬರೂ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯವರಾಗಿದ್ದರು. ಈ ಐವರ ಸಾವಿನ ಮೂಲವು ಆಸ್ಪತ್ರೆಯೇ ಆಗಿದೆ.
ಪಡೀಲ್‌ನ ಆಸ್ಪತ್ರೆಯ ಉದ್ಯೋಗಿಯಾಗಿರುವ ಬಂಟ್ವಾಳದ ನರಿಕೊಂಬುವಿನ ಮಹಿಳೆ, ಶಕ್ತಿನಗರದ 45 ವರ್ಷ ಪ್ರಾಯದ ಗಂಡಸು, ಬಂಟ್ವಾಳದ 69 ವರ್ಷದ ಗಂಡಸು, ಬೋಳೂರಿನ ಒಂದೇ ಮನೆಯ 62 ವರ್ಷದ ಗಂಡಸು, 51 ವರ್ಷದ ಗಂಡಸು, 35 ವರ್ಷದ ಮಹಿಳೆ, 11 ವರ್ಷದ ಬಾಲಕಿ, ಬಂಟ್ವಾಳದ 16 ವರ್ಷದ ಬಾಲಕಿ, ಬಂಟ್ವಾಳದ 30 ವರ್ಷದ ವ್ಯಕ್ತಿ, ಬಂಟ್ವಾಳದ 60 ಮತ್ತು 70 ವರ್ಷದ ವೃದ್ಧೆಯರು, ಕಾರ್ಕಳ ತಾಲೂಕಿನ 50 ವರ್ಷ ಪ್ರಾಯದ ಮಹಿಳೆ ಮತ್ತು 26 ವರ್ಷದ ಅವರ ಮಗ, ಸೋಮೇಶ್ವರ ಸಮೀಪದ ಪಿಲಾರ್-ದಾರಂದಬಾಗಿಲು ವಿನ 38 ವರ್ಷದ ಮಹಿಳೆ ಹೀಗೆ ದ.ಕ.ಜಿಲ್ಲೆಯ 15 ಮಂದಿಗೆ ಪಾಸಿಟಿವ್‌ಗೆ ಮತ್ತು ಸಾವಿಗೀಡಾದ 5 ಮಂದಿಗೆ ಪಡೀಲ್‌ನ ಆಸ್ಪತ್ರೆಯೇ ಮೂಲ ವಾಗಿದೆ. ಇನ್ನು ಭಟ್ಕಳದ ಪ್ರಕರಣಗಳಿಗೂ ಪಡೀಲ್ ಆಸ್ಪತ್ರೆಗೂ ಲಿಂಕ್ ಇದೆ.
ಈ ಆಸ್ಪತ್ರೆಗೆ ಸಂಬಂಧಿಸಿ ಕೊರೋನದ ಮೂಲದ ಬಗ್ಗೆ ತನಿಖೆ ನಡೆಸಲು ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯ ಮೇರೆಗೆ ಜಿಲ್ಲಾಧಿಕಾರಿ ತಜ್ಞ ವೈದ್ಯರ ಸಮಿತಿಯನ್ನು ರಚಿಸಿದೆ. ಸಮಿತಿಯು ಮಧ್ಯಂತರ ವರದಿ ಸಲ್ಲಿಸಿದೆ. ಸಂಪೂರ್ಣ ವರದಿ ಸಲ್ಲಿಕೆಗೆ ಕಾಲಾವಕಾಶ ಕೇಳಿದೆ.
ಜಿಲ್ಲೆಯಲ್ಲಿ ಕೊರೋನ ಸಾವಿನ ಮತ್ತು ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದರೂ ಕೂಡ ಪಡೀಲ್‌ನ ಖಾಸಗಿ ಆಸ್ಪತ್ರೆಯ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿರುವ ಬಗ್ಗೆ ಹಲವು ಸಂಶಯಗಳನ್ನು ಹುಟ್ಟು ಹಾಕಿವೆ.
ಹೆಚ್ಚಿದ ಆತಂಕ: ಒಟ್ಟಿನಲ್ಲಿ ಮಾರಕವಾಗಿ ಪರಿಣಮಿಸಿರುವ ಕೊರೋನ ಸೋಂಕಿನಿಂದಾಗಿ ದ.ಕ. ಜಿಲ್ಲೆಯ ಜನತೆ ಆತಂಕಿತರಾಗಿದ್ದಾರೆ. ಲಾಕ್‌ಡೌನ್ ಸಡಿಲಿಕೆಯ ಬಳಿಕ ಕೊರೋನ ಪಾಸಿಟಿವ್ ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಜನರು ಅಕ್ಷರಶಃ ಕಂಗಾಲಾಗಿದ್ದಾರೆ. ಈ ಮಧ್ಯೆ ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿವೆ. ಇದಕ್ಕೂ ಪಡೀಲ್ ಆಸ್ಪತ್ರೆಯೇ ಮೂಲವಾಗಿದೆ.