ಚೀನಾ ಸಂಬಂಧ ಕಡಿದುಕೊಳ್ಳುವ ಸೂಚನೆ ನೀಡಿದ ಟ್ರಂಪ್

Update: 2020-05-15 15:06 GMT

ವಾಶಿಂಗ್ಟನ್, ಮೇ 15: ನೋವೆಲ್-ಕೊರೋನ ವೈರಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿ ಚೀನಾದೊಂದಿಗಿನ ಅಮೆರಿಕದ ಸಂಬಂಧ ಮತ್ತಷ್ಟು ಹದಗೆಟ್ಟಿದೆ ಎಂಬ ಸೂಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ನೀಡಿದ್ದಾರೆ. ಈ ಕ್ಷಣದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆಗೆ ಮಾತನಾಡಲು ನನಗೆ ಆಸಕ್ತಿಯಿಲ್ಲ ಎಂದು ಹೇಳಿರುವ ಅವರು, ಆ ದೇಶದೊಂದಿಗಿನ ಸಂಬಂಧವನ್ನು ನಾನು ಕಡಿದು ಕೊಳ್ಳಬಹುದಾಗಿದೆ ಎಂದೂ ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ತಡೆಯಲು ಚೀನಾ ವಿಫಲವಾಗಿರುವುದಕ್ಕೆ ನನಗೆ ತೀರಾ ನಿರಾಶೆಯಾಗಿದೆ ಎಂದು ಗುರುವಾರ ಫಾಕ್ಸ್ ಬಿಸ್ನೆಸ್ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಟ್ರಂಪ್ ಹೇಳಿದರು.

ಅಮೆರಿಕವು ಜನವರಿಯಲ್ಲಿ ಚೀನಾದೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದ ಮೇಲೆ ಈ ಸಾಂಕ್ರಾಮಿಕವು ಕರಿಛಾಯೆ ಹರಡಿದೆ ಎಂದು ಅವರು ನುಡಿದರು. ಚೀನಾ ಜೊತೆಗಿನ ವ್ಯಾಪಾರ ಒಪ್ಪಂದವು ಮಹತ್ವದ ಸಾಧನೆಯಾಗಿದೆ ಎಂಬುದಾಗಿ ಈ ಹಿಂದೆ ಅವರು ಹೇಳಿದ್ದರು.

ಹೀಗೆ ಆಗಲು ಅವರು ಯಾವತ್ತೂ ಬಿಡಬಾರದಿತ್ತು ಎಂದು ಟ್ರಂಪ್ ಹೇಳಿದರು. ನಾನು ಚೀನಾದ ಜೊತೆಗೆ ಒಂದು ಶ್ರೇಷ್ಠ ವ್ಯಾಪಾರ ಒಪ್ಪಂದ ಮಾಡಿಕೊಂಡೆ. ಆದರೆ ಈಗ ನನಗೆ ಆ ಭಾವನೆ ಇಲ್ಲ. ಒಪ್ಪಂದಕ್ಕೆ ಸಹಿ ಹಾಕಿದ ಶಾಯಿ ಒಣಗುವುದಕ್ಕೂ ಮುಂಚೆ ಅಲ್ಲಿಂದ ಸಾಂಕ್ರಾಮಿಕ ಬಂದಿದೆ. ಈಗ ನನಗೆ ಒಪ್ಪಂದದ ಬಗ್ಗೆ ಆಸಕ್ತಿಯಿಲ್ಲ ಎಂದು ಅವರು ನುಡಿದರು.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರೊಂದಿಗೆ ನಾನು ಉತ್ತಮ ಸಂಬಂಧ ಹೊಂದಿರುವುದಾಗಿ ಟ್ರಂಪ್ ಹೇಳುತ್ತಾ ಬಂದಿದ್ದರು. ಈಗ ಅವರ ಕೋಪವು ಅಧ್ಯಕ್ಷರವರೆಗೂ ವಿಸ್ತರಣೆಯಾಗಿದೆ.

ಆದರೆ, ಈ ಕ್ಷಣಕ್ಕೆ ನಾನು ಕ್ಸಿ ಜಿನ್‌ಪಿಂಗ್‌ರೊಂದಿಗೆ ಮಾತನಾಡಲು ಬಯಸುವುದಿಲ್ಲ ಎಂದು ಸಂದರ್ಶನದಲ್ಲಿ ಟ್ರಂಪ್ ಹೇಳಿದರು. ಅಮೆರಿಕದಲ್ಲಿ ಕೊರೋನ ವೈರಸ್‌ನಿಂದಾಗಿ ಈವರೆಗೆ 85,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಡಬ್ಲ್ಯುಎಚ್‌ಒಗೆ ಸಂಬಂಧಿಸಿದ ನಿರ್ಧಾರ ಮುಂದಿನ ವಾರ: ಟ್ರಂಪ್

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಗೆ ಸಂಬಂಧಿಸಿದ ನಿರ್ಧಾರವೊಂದನ್ನು ಶ್ವೇತಭವನ ಮುಂದಿನವಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಗುರುವಾರ ಹೇಳಿದ್ದಾರೆ. ಶ್ವೇತಭವನವು ಅಮೆರಿಕದ ಅಧ್ಯಕ್ಷರ ಆಡಳಿತ ಕಚೇರಿ ಮತ್ತು ನಿವಾಸವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಗೆ ಸಂಬಂಧಿಸಿದ ನಿರ್ಧಾರವೊಂದನ್ನು ನಾವು ಶೀಘ್ರದಲ್ಲೇ ಪ್ರಕಟಿಸಲಿದ್ದೇವೆ. ಬಹುಶಃ ಈ ನಿರ್ಧಾರ ಮುಂದಿನ ವಾರದಲ್ಲೇ ಹೊರಬೀಳಬಹುದು ಎಂದು ಟ್ರಂಪ್ ಹೇಳಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ.

ಮಾರಕ ಕೊರೋನ ವೈರಸನ್ನು ನಿಭಾಯಿಸುವಲ್ಲಿ ವಿಶ್ವಆರೋಗ್ಯ ಸಂಸ್ಥೆಯು ವಿಫಲವಾಗಿದೆ ಹಾಗೂ ಅದು ಚೀನಾದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂಬುದಾಗಿ ಟ್ರಂಪ್ ಆರೋಪಿಸಿದ್ದರು. ಅದಕ್ಕೆ ನೀಡಬೇಕಾಗಿದ್ದ ಅಮೆರಿಕದ ದೇಣಿಗೆಯನ್ನು ಟ್ರಂಪ್‌ಎಪ್ರಿಲ್‌ನಲ್ಲಿ ರದ್ದುಪಡಿಸಿದ್ದರು. ಅದೂ ಅಲ್ಲದೆ, ವಿಶ್ವಆರೋಗ್ಯ ಸಂಸ್ಥೆಗೆ ಪರ್ಯಾಯವಾಗಿ ಇನ್ನೊಂದು ಸಂಸ್ಥೆಯನ್ನು ತರುವುದಾಗಿ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News