ಮಂಜೇಶ್ವರ-ಕನ್ನಡ ಭಾಷಾ ಪ್ರದೇಶ ಸ್ಥಾನಮಾನಕ್ಕೆ ಕಸಾಪ ಸ್ವಾಗತ
ಮಂಗಳೂರು, ಮೇ 15: ಕನ್ನಡ ಭಾಷಿಕರ ಪ್ರದೇಶವಾದ ಗಡಿನಾಡು ಕಾಸರಗೋಡು, ಭಾಷಾ ಅಲ್ಪಸಂಖ್ಯಾತ ನೆಲೆಯಲ್ಲಿ ಕನ್ನಡ ಭಾಷಾ ಪ್ರದೇಶವೆಂದೇ ಕೇರಳ ರಾಜ್ಯ ಸರಕಾರದ ಆಡಳಿತಾತ್ಮಕ ನೆಲೆಯಲ್ಲಿ ಪರಿಗಣಿಸಲಾಗಿತ್ತು. ಭಾಷಾ ಅಲ್ಪಸಂಖ್ಯಾತ ನೆಲೆಯಲ್ಲಿ ಕೇರಳ ರಾಜ್ಯ ಸರಕಾರವು ಒದಗಿಸಿರುವ ವಿಶೇಷ ಸ್ಥಾನಮಾನವು ಸ್ವಾಗತಾರ್ಹವಾಗಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
ಕನ್ನಡ ಪರ ಹೋರಾಟಗಾರರ ಫಲವಾಗಿ ಆ ಪ್ರದೇಶದ ಎಲ್ಲಾ ಕನ್ನಡಿಗರಿಗೆ ಆಡಳಿತಾತ್ಮಕವಾಗಿ ಕನ್ನಡ ಭಾಷಾ ಅನುಷ್ಠಾನ, ಕನ್ನಡ ಭಾಷಾ ನೆಲೆಯಲ್ಲಿ ಶೈಕ್ಷಣಿಕ ಸವಲತ್ತುಗಳು, ಸಾಂಸ್ಕೃತಿಕ ಚಟುವಟಿಕೆಗಳು, ಯಕ್ಷಗಾನ, ಇನ್ನಿತರ ಕಲೆಗಳಿಗೆ ವಿಶೇಷ ಸೌಲಭ್ಯ ನೀಡಲಾಗಿತ್ತು. ಕೇರಳ ಸರಕಾರ ಕಾಸರಗೋಡನ್ನು ಆಡಳಿತಾತ್ಮಕವಾಗಿ ವಿಭಜಿಸುವ ಸಂದರ್ಭ ಮಂಜೇಶ್ವರವನ್ನು ಪ್ರತ್ಯೇಕ ತಾಲೂಕಾಗಿ ಮಾಡಲಾಗಿತ್ತಾದರೂ ಮಂಜೇಶ್ವರ ತಾಲೂಕಿಗೆ ಕನ್ನಡ ಭಾಷಾ ಪ್ರದೇಶ ಸ್ಥಾನಮಾನದ ಸವಲತ್ತು ಲಭಿಸಿರಲಿಲ್ಲ. ಸಹಜವಾಗಿ ಅಲ್ಲಿನ ಕನ್ನಡಿಗರು ತಾಂತ್ರಿಕ ನೆಲೆಯಲ್ಲಿ ಸೌಲಭ್ಯಗಳಿಂದ ವಂಚಿತರಾಗಿದ್ದರು. ಪ್ರಸ್ತುತ ಕೇರಳ ರಾಜ್ಯ ಸರಕಾರವು ಮಂಜೇಶ್ವರ ತಾಲೂಕನ್ನು ಕನ್ನಡ ಭಾಷಾ ಅಲ್ಪಸಂಖ್ಯಾತ ನೆಲೆಯಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಿ ಆದೇಶ ಹೋರಡಿಸಿರುವುದು ಸಮಸ್ತ ಕನ್ನಡಿಗರೂ ಸಂಭ್ರಮ ಪಡುವ ಸ್ವಾಗತಾರ್ಹ ನಿಲುವು ಎಂದು ಕಲ್ಕೂರ ಹೇಳಿದ್ದಾರೆ.
ಮಂಜೇಶ್ವರ ಗೋವಿಂದ ಪೈ, ಕಯ್ಯರ ಕಿಂಞಣ್ಣ ರೈ, ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬಿ.ಎಂ. ಇದಿನಬ್ಬ, ಕರ್ನಾಟಕ ಗಡಿ ರಕ್ಷಣಾ ಸಮಿತಿ ಸಹಿತ ಅನೇಕರ ಹೋರಾಟಕ್ಕೆ ಲಭಿಸಿರುವ ಪ್ರತಿಫಲವಿದಾಗಿದಾಗಿದೆ ಎಂದು ಕಲ್ಕೂರಾ ತಿಳಿಸಿದ್ದಾರೆ.