ಪುತ್ತೂರಿನಿಂದ ಯುಪಿಗೆ ವಿಶೇಷ ರೈಲು: ಊರಿಗೆ ಹಿಂದಿರುಗಿದ 1520 ಮಂದಿ ವಲಸೆ ಕಾರ್ಮಿಕರು

Update: 2020-05-16 10:34 GMT

ಪುತ್ತೂರು : ಪುತ್ತೂರಿನಿಂದ ಮೇ 12ರಂದು ವಿಶೇಷ ರೈಲಿನ ಮೂಲಕ 1498 ಮಂದಿ ವಲಸೆ ಕಾರ್ಮಿಕರು ಬಿಹಾರಕ್ಕೆ ತೆರಳಿದ ಬೆನ್ನಲೇ ಇದೀಗ ಬಂಟ್ವಾಳ ಸೇರಿದಂತೆ ಪುತ್ತೂರು ಉಪವಿಭಾಗದಿಂದ ಒಟ್ಟು 1520 ಮಂದಿ ಉತ್ತರ ಪ್ರದೇಶದ ವಲಸೆ ಕಾರ್ಮಿಕರು ಶನಿವಾರ ವಿಶೇಷ ರೈಲಿನ ಮೂಲಕ ಪುತ್ತೂರಿನಿಂದ ತಮ್ಮ ಊರಿಗೆ ತೆರಳಿದ್ದಾರೆ.

ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ಎಡಿಷನಲ್ ಎಸ್ಪಿ ವಿಕ್ರಂ ಅಮ್ಟೆ, , ಡಿವೈಎಸ್ಪಿ ದಿನಕರ್ ಶೆಟ್ಟಿ, ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರೀ, ಕಡಬ ತಹಶೀಲ್ದಾರ್ ಜಾನ್‌ಪ್ರಕಾಶ್, ಅನಂತಶಂಕರ ಸುಳ್ಯ ಜತೆ ಕಂದಾಯ ಇಲಾಖೆ ಸಿಬಂದಿ, ಕೆಎಸ್ಸಾರ್ಟಿಸಿ ಅಧಿಕಾರಿಗಳು, ರೈಲ್ವೇ ಅಧಿಕಾರಿಗಳು , ಪೊಲೀಸ್ ಸಿಬಂದಿ ಸಹಕಾರದಲ್ಲಿ 1520 ಮಂದಿ ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಸ್ಕ್ರೀನಿಂಗ್ ಹಾಗೂ ವೈದ್ಯಕೀಯ ಪರಿಶೀಲನೆ ನಡೆಸಿ ಕಳುಹಿಸಿಕೊಡಲಾಯಿತು.

ಪುತ್ತೂರು ಉಪವಿಭಾಗದ ಬೆಳ್ತಂಗಡಿ, ಸುಳ್ಯ, ಸುಬ್ಯಹ್ಮಣ್ಯ, ಕಡಬ, ಬಂಟ್ವಾಳ ಭಾಗಗಳಿಂದ 42 ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಬಂದ ಈ ವಲಸೆ ಕಾರ್ಮಿಕರನ್ನು ಪುತ್ತೂರು ಮಹಾಲಿಂಗೇಶ್ವರ ದೇವಳದ ದೇವರ ಮಾರುಗದ್ದೆಯಲ್ಲಿ ಒಟ್ಟು ಸೇರಿಸಿ ಅಲ್ಲಿಂದ ಅದೇ ಬಸ್ ಮೂಲಕ ರೈಲ್ವೇ ಸ್ಟೇಶನ್‌ಗೆ ಕರೆತರಲಾಯಿತು. ನಂತರ ಶ್ರಮಿಕ ರೈಲಿನಲ್ಲಿ ಇವರನ್ನು ಉತ್ತರಪ್ರದೇಶಕ್ಕೆ ಕಳುಹಿಸಲಾಯಿತು.

ಈ ವಲಸೆ ಕಾರ್ಮಿಕರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಳ ಮತ್ತು ಪುತ್ತೂರು ಮಹಾಲಿಂಗೇಶ್ವರ ದೇವಳದ ವತಿಯಿಂದ ಊಟ, ಹಾಗೂ ಕಿಟ್, ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಯಿತು. ಪುತ್ತೂರು ಕಬಕ ರೈಲ್ವೇ ನಿಲ್ದಾಣದಿಂದ ಹೊರಟ ಶ್ರಮಿಕ ರೈಲು ಅರಸೀಕೆರೆ, ಗುಂಟಕಲ್, ನಾಗಪುರ, ಝಾನ್ಸಿ, ಲಕ್ನೋ ಮೂಲಕ ಸುಮಾರು 52 ಗಂಟೆಗಳಲ್ಲಿ ಉತ್ತರಪ್ರದೇಶ ಸೇರಲಿದ್ದಾರೆ ಎಂದು ನೈರುತ್ಯ ರೈಲ್ವೇ ಮೈಸೂರು ವಿಭಾಗದ ಹಿರಿಯ ಟಿಕೇಟ್ ನಿರೀಕ್ಷಕ ವಿಠಲ್ ನಾಯಕ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News