ಭಟ್ಕಳದ ಕುಟುಂಬ ದಾಖಲಾತಿ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿಲ್ಲ : ತೇಜಸ್ವಿನಿ ಆಸ್ಪತ್ರೆ ಸ್ಪಷ್ಟನೆ

Update: 2020-05-16 11:54 GMT

ಮಂಗಳೂರು, ಮೇ 16: ಮೂಳೆ ಮುರಿತಕ್ಕೊಳಗಾಗಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಗುವಿನ ಕುಟುಂಬದ ಬಗ್ಗೆ ಕೆಲವು ಮಾಧ್ಯಮಗಳು ಪ್ರಕಟಿಸಿದ್ದ ವರದಿಯು ಕಪೋಲಕಲ್ಪಿತ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ನೀಡಿರುವ ಸ್ಪಷ್ಟನೆಯಲ್ಲಿ ಬಹಿರಂಗಗೊಂಡಿದೆ.

ಭಟ್ಕಳದ ಕುಟುಂಬವೊಂದು ತಮ್ಮ ಮಗುವಿನ ಚಿಕಿತ್ಸೆಗಾಗಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗುವಾಗ ನಾವು ಕುಂದಾಪುದಿಂದ ಬಂದಿರುವುದಾಗಿ ಸುಳ್ಳು ಮಾಹಿತಿ ನೀಡಿತ್ತು. ಇದರಿಂದ ಭಟ್ಕಳದಿಂದ ಸೋಂಕಿತರು ಮಂಗಳೂರಿಗೆ ಬಂದು ಕೊರೋನ ಹರಡುವ ಅಪಾಯವಿದೆ. ಹಾಗಾಗಿ ತೇಜಸ್ವಿನಿ ಆಸ್ಪತ್ರೆ ಸಂಪೂರ್ಣ ಸೀಲ್ ಡೌನ್ ಮಾಡಿ ಎಲ್ಲಾ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.

ಆದರೆ, ಈ ಸಂಬಂಧ ಪತ್ರಿಕಾ ಪ್ರಟಣೆ ನೀಡಿರುವ ತೇಜಸ್ವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಎಂ. ಶಾಂತರಾಮ ಶೆಟ್ಟಿಯವರು ಭಟ್ಕಳದ ಕುಟುಂಬ ಆಸ್ಪತ್ರೆಗೆ ದಾಖಲಾತಿ ಸಮಯದಲ್ಲಿ ಅವರು ಯಾವುದೇ ವಿಷಯವನ್ನು ಗೌಪ್ಯವಾಗಿಡದೆ ಆಧಾರ್ ಕಾರ್ಡ್‌ನ್ನು ಕೊಟ್ಟಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ತೇಜಸ್ವಿನಿ ಆಸ್ಪತ್ರೆಯ ಆಡಳಿತ ನಿದೇರ್ಶಕ ಡಾ. ಎಂ ಶಾಂತರಾಮ ಶೆಟ್ಟಿ ಅವರು ನೀಡಿರುವ ಪತ್ರಿಕಾ ಹೇಳಿಕೆ ಇಂತಿದೆ.

''ನಾವು ಈ ಮೂಲಕ ಧೃಡಪಡಿಸುವುದೇನೆಂದರೆ ಮೂರು ದಿವಸಗಳ ಮುಂಚೆ ಭಟ್ಕಳದ ಆರು ವರ್ಷ ವಯಸ್ಸಿನ ಬಾಲಕಿಯು ಮೊಣಕೈಯ ಎಲುಬು ಮುರಿತದ ಒಟ್ಟಿಗೆ ರಕ್ತನಾಳಕ್ಕು ಪೆಟ್ಟಾಗಿ ರಕ್ತ ಚಲನೆಯಿಲ್ಲದೆ ತುರ್ತು ಚಿಕಿತ್ಸೆಗಾಗಿ ಬಾಲಕಿ ಮತು ಆಕೆಯ ತಾಯಿ ಮೇ 11ರಂದು ಬೆಳಗಿನ ಜಾವ 5 ಗಂಟೆಗೆ ಮಂಗಳೂರಿನ ನಮ್ಮ ಆಸ್ಪತ್ರೆಗೆ (ತೇಜಸ್ವಿನಿ ಆಸ್ಪತ್ರೆ) ದಾಖಲಾಗಿದ್ದು ಅದೇ ದಿನ ಬೆಳಗ್ಗೆ ತುರ್ತು ಶಸ್ತ್ರ ಚಿಕಿತ್ಸೆಯನ್ನು (Closed Reduction and K-wire fixation) ಮಾಡಲಾಯಿತು.

ಭಟ್ಕಳವು ಕೊರೋನ hotspot ಪ್ರದೇಶವಾಗಿದ್ದು ಅಲ್ಲಿ ಸುಮಾರು 10-12 ಕೊರೋನ ಕೇಸ್‌ಗಳು ಪತ್ತೆಯಾಗಿರುವುದರಿಂದ ಹಾಗೂ ತಾಯಿ ಮಗಳು ಅದೇ ಪ್ರದೇಶದವರಾಗಿದ್ದರು. ತಾಯಿಯು ಭಾವನಾತ್ಮಕ ಹಾಗೂ ಆತಂಕಗೊಳಗಾಗಿದ್ದರಿಂದ ಅವರು ಸ್ವಲ್ಪಮಟ್ಟಿನ ಶ್ವಾಸೇಂದ್ರಿಯ ಲಕ್ಷಣಗಳನ್ನು ಹೊಂದಿದ್ದರು. ಈ ವಿಷಯವನ್ನು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಯಿತು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಾಯಿ ಮತ್ತು ಮಗುವಿನ ಗಂಟಲಿನ ದ್ರವ ಮಾದರಿ ಪರೀಕ್ಷೆ ಮಾಡಲು ತಿಳಿಸಿದ್ದರು. ಹಾಗೆಯೇ ತಾಯಿ ಹಾಗೂ ಮಗುವಿನ ಗಂಟಲ ಮಾದರಿಯನ್ನು ಮೇ 11 ರಂದು ಸಂಜೆ ಜಿಲ್ಲಾ ಆಡಳಿತ ಆಸ್ಪತ್ರೆ ಸಿಬ್ಬಂದಿ ತೆಗೆದು ಕೊಂಡು ಹೋಗಿರುತ್ತಾರೆ.

ಆಸ್ಪತ್ರೆಗೆ ದಾಖಲಾತಿ ಸಮಯದಲ್ಲಿ ಅವರು ಯಾವುದೇ ವಿಷಯವನ್ನು ಗೌಪ್ಯವಾಗಿಡದೆ ಆಧಾರ್ ಕಾರ್ಡ್‌ನ್ನು ಕೊಟ್ಟಿದ್ದರು. ಮೇ 13 ರಂದು ಬಂದ ಮೇಲೆ ವೆನ್ಲಾಕ್ ಆಸ್ಪತ್ರೆಯ ವರದಿಯ ಪ್ರಕಾರ ತಾಯಿ ಮತ್ತು ಮಗುವಿನ ದ್ರವ ಮಾದರಿ ವರದಿಗಳು (Report) ನಕರಾತ್ಮಕ (Negative) ಆಗಿರುತ್ತದೆ. ಇಷ್ಟರಲ್ಲಿಯೇ ಮಗು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಳು ಹಾಗೂ ನಾಡಿ ಮಿಡಿತವು ಮರಳಿತ್ತು. ಮೇ 13 ರಂದು ಸಂಜೆ ಮಗು ಮತ್ತು ತಾಯಿಯನ್ನು ಆಸ್ಪತ್ರೆಯಿಂದ ಬಿಡುಗಡೆ (Discharge) ಮಾಡಲಾಯಿತು''.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News