×
Ad

ಉಡುಪಿಯಲ್ಲಿ ಕೋವಿಡ್-19ಗೆ ಮೊದಲ ಬಲಿ: ಮುಂಬೈಯಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಕೆಎಂಸಿಯಲ್ಲಿ ನಿಧನ

Update: 2020-05-16 19:58 IST

ಉಡುಪಿ, ಮೇ 16: ಮಹಾರಾಷ್ಟ್ರದ ಮುಂಬೈಯಿಂದ ತನ್ನ ಹುಟ್ಟೂರಾದ ಕುಂದಾಪುರ ತಾಲೂಕಿಗೆ ಮೇ 13ರಂದು ಕುಟುಂಬದೊಂದಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಅದೇ ದಿನ ಎದೆನೋವಿಗಾಗಿ ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ನೋವು ಉಲ್ಬಣಿಸಿದ ಕಾರಣ ಸಂಜೆ ಅವರನ್ನು ಮಣಿಪಾಲ ಕೆಎಂಸಿಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದರೂ, ತೀವ್ರ ಹೃದಯಾಘಾತದಿಂದ ಮೇ 14ರಂದು ಅವರು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿ ಮುಂಬೈಯಿಂದ ಬಂದ ಕಾರಣ, ಕೊರೋನ ಟೆಸ್ಟ್ ನಡೆಸಿದಾಗ, ಅವರ ಗಂಟಲು ದ್ರವ ಮಾದರಿ ಪಾಸಿಟಿವ್ ಆಗಿ ಬಂದಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಇಂದು ಸಂಜೆ ಪ್ರಕಟಿಸಿದ್ದಾರೆ.

ಇದರಿಂದ ಕೋವಿಡ್-19 ಉಡುಪಿ ಜಿಲ್ಲೆಯಲ್ಲಿ ತನ್ನ ಮೊದಲ ಬಲಿಯನ್ನು ಪಡೆದಂತಾಗಿದೆ. ಇದೀಗ ಮೃತವ್ಯಕ್ತಿಯೊಂದಿಗೆ ಪ್ರಯಾಣಿಸಿದ ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಐವರನ್ನು ಉದ್ಯಾವರ ಎಸ್‌ಡಿಎಂ ಕ್ವಾರೆಂಟೈನ್ ಕೇಂದ್ರಕ್ಕೆ ಸೇರಿಸಲಾಗಿದೆ. ಅವರು ಕುಂದಾಪುರ ಕ್ವಾರಂಟೈನ್ ಕೇಂದ್ರಕ್ಕೆ ಬಂದಾಗ ಅವರ ಸಂಪರ್ಕಕ್ಕೆ ಬಂದ 57 ಮಂದಿಯನ್ನು ಪ್ರಾಥಮಿಕ ಸಂಪರ್ಕಿತರೆಂದೂ, 37ಮಂದಿಯನ್ನು ಸೆಕೆಂಡರಿ ಕಾಂಟಾಕ್ಟ್ ಎಂದೂ ಗುರುತಿಸಲಾಗಿದ್ದು, ಇವರನ್ನು ಕ್ವಾರಂಟೈನ್ ಲ್ಲಿ ವೈದ್ಯರ ನಿಗಾದಲ್ಲಿರಿಸಲಾಗಿದೆ.

ಮೃತವ್ಯಕ್ತಿಗೆ ಕುಂದಾಪುರದಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್‌ಗಳು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಗಳನ್ನು ಅನುಸರಿಸಿ ಪಿಪಿಕಿಟ್ ಧರಿಸಿ ಚಿಕಿತ್ಸೆ ನೀಡಿದ್ದಾರೆ. ಅದೇ ರೀತಿ ಕೆಎಂಸಿ ಮಣಿಪಾಲದ ವೈದ್ಯರು ಸಹ ಎಲ್ಲಾ ಸುರಕ್ಷಿತ ಕವಚಗಳನ್ನು ಧರಿಸಿದ್ದು, ಪಿಪಿ ಕಿಟ್‌ಗಳನ್ನು ಧರಿಸದೇ ಅವರ ಸಂಪರ್ಕಕ್ಕೆ ಬಂದ ಕೆಎಂಸಿಯ ಮೂವರು ಸಿಬ್ಬಂದಿಗಳನ್ನು ಇದೀಗ ಕ್ವಾರಂಟೈನ್‌ ನಲ್ಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ನುಡಿದರು.

ಅಂತ್ಯಕ್ರಿಯೆಗೆ ಸೂಚನೆ: ಮೃತ ವ್ಯಕ್ತಿಯಲ್ಲಿ ಕೊರೋನ ಸೋಂಕು ದೃಢಪಟ್ಟಿರುವುದರಿಂದ, ಅವರ ಅಂತ್ಯಸಂಸ್ಕಾರವನ್ನು ಕೋವಿಡ್-19 ಮಾರ್ಗದರ್ಶಿ ಸೂತ್ರದಂತೆ ನಡೆಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಎದೆನೋವಿಗಾಗಿ ಆಸ್ಪತ್ರೆಗೆ: ಕುಂದಾಪುರ ತಾಲೂಕು ಜಪ್ತಿಯ 54ರ ಹರೆಯದ ಈ ವ್ಯಕ್ತಿ ಮೇ 13ರಂದು ಬೆಳಗ್ಗೆ ಕುಟುಂಬದೊಂದಿಗೆ ಮುಂಬೈ ಯಿಂದ ಬಂದಿದ್ದು, ಅವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಆದರೆ ಕೆಲಹೊತ್ತಿನಲ್ಲಿ ಎದೆನೋವಿನ ಕಾರಣ ಅವರನ್ನು ಕುಂದಾಪುರ ತಾಲೂಕು ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನೋವು ಉಲ್ಬಣಿಸಿದ್ದರಿಂದ ಸಂಜೆ ಅವರನ್ನು ಮಣಿಪಾಲ ಕೆಎಂಸಿಗೆ ಸೇರಿಸಿ ಯಶಸ್ವಿ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆದರೆ ತೀವ್ರ ಹೃದಯಾಘಾತದಿಂದ ಅವರು ಮರುದಿನ (ಮೇ 14) ಮೃತಪಟ್ಟರೆಂದು ತಿಳಿದುಬಂದಿದೆ.

ಅವರು ಮುಂಬೈಯಿಂದ ಬಂದಿದ್ದು, ಉಸಿರಾಟದ ತೊಂದರೆಯೂ ಇದ್ದುದದರಿಂದ ಅವರಿಗೆ ಕೋವಿಡ್-19 ಟೆಸ್ಟ್ ನಡೆಸಲಾಗಿತ್ತು. ಇಂದು ಸಂಜೆ ಅದರ ಫಲಿತಾಂಶ ಬಂದಿದ್ದು, ಕೊರೋನಕ್ಕೆ ಪಾಸಿಟಿವ್ ಆಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದೀಗ ಅವರೊಂದಿಗೆ ಬಂದ ಕುಟುಂಬಿಕ ರನ್ನು ಹಾಗೂ ಕುಂದಾಪುರದಲ್ಲಿ ಪ್ರಾಥಮಿಕ ಸಂಪರ್ಕಕ್ಕೆ ಬಂದ 57 ಮತ್ತು ಸೆಕೆಂಡರಿ ಸಂಪರ್ಕಕ್ಕೆ ಬಂದ 38 ಮಂದಿಯೊಂದಿಗೆ ಕೆಎಂಸಿಯ ಮೂವರು ಸಿಬ್ಬಂದಿಗಳನ್ನು ಕ್ವಾಂಟೈನ್ ಹಾಗೂ ನಿಗಾದಲ್ಲಿ ಇರಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News