×
Ad

ಉಡುಪಿ: ರಕ್ತದಾನ ಮಾಡಿ ಮಾದರಿಯಾದ ಡಿಎಫ್‌ಓ ಆಶೀಶ್ ರೆಡ್ಡಿ

Update: 2020-05-16 20:01 IST

ಉಡುಪಿ, ಮೇ 16: ಭಾರತದಲ್ಲಿ ಪ್ರತೀ ವರ್ಷ 20 ಲಕ್ಷ ಯೂನಿಟ್ ರಕ್ತದ ಕೊರತೆ ಕಂಡುಬರುತ್ತಿದೆ. ಆದ್ದರಿಂದ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಹೇಳಿದ್ದಾರೆ.

ಶನಿವಾರ, ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘ ಕುಂದಾಪುರ ಪ್ರಾದೇಶಿಕ ಹಾಗೂ ಕುದುರೆಮುಖ ವನ್ಯಜೀವಿ ವಿಭಾಗ, ರಕ್ತನಿಧಿ ಕೇಂದ್ರ ಜಿಲ್ಲಾ ಸರಕಾರಿ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಉಡುಪಿ ಪುರಭವನದ ಬಳಿಯ ಗ್ರಂಥಾಲಯ ಕಟ್ಟಡದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ಶಿಬಿರದಲ್ಲಿ ಸ್ವಯಂ ರಕ್ತದಾನ ಮಾಡಿ ಮಾತನಾಡುತಿದ್ದರು.

ದೇಶದಾದ್ಯಂತ ಲಾಕ್‌ಡೌನ್ ಅವಧಿಯಲ್ಲಿ ರಕ್ತದ ಕೊರತೆ ಅಧಿಕವಾಗಿದ್ದು, ಇಂತಹ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ರಕ್ತದಾನ ಮಾಡು ವಂತೆ ತಿಳಿಸಿದ ಡಿಎಫ್‌ಓ ಆಶೀಶ್ ರೆಡ್ಡಿ, ರಕ್ತದಾನದಿಂದ ಮತ್ತೊಬ್ಬರ ಜೀವ ಉಳಿಸುವ ಜೊತೆಗೆ, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ ಎಂದರು.

ಇದರೊಂದಿಗೆ ಸಮಾಜಕ್ಕೆ ಕಿಂಚಿತ್ ಸೇವೆ ಸಲ್ಲಿಸಿದ ಆತ್ಮ ತೃಪ್ತಿ ದೊರೆಯುತ್ತದೆ. ವಿರಳ ರಕ್ತದ ಗುಂಪುಗಳಲ್ಲಿ ಒಂದಾಗಿರುವ ಬಿ ನೆಗೆಟಿವ್ ರಕ್ತ ಹೊಂದಿರುವ ತಾನು, ಈ ಹಿಂದೆ ತುರ್ತು ಚಿಕಿತ್ಸೆಗೆ ಅಗತ್ಯವಿದ್ದ ರೋಗಿಯೊಬ್ಬರಿಗೆ ರಕ್ತ ನೀಡಿದ್ದು, ಇಂದು ಸ್ವಯಂ ಪ್ರೇರಿತವಾಗಿ ನೀಡುತ್ತಿದ್ದೇನೆ ಎಂದು ನುಡಿದು, ಸ್ವತ ರಕ್ತದಾನ ಮಾಡಿ ಮಾದರಿಯಾದರು.

ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘ ಉಡುಪಿ ಘಟಕದ ಅಧ್ಯಕ್ಷ ಮುಂಜುನಾಥ ನಾಯಕ್ ಮಾತನಾಡಿ, ಕೋವಿಡ್-19 ಪ್ರಯುಕ್ತದ ಲಾಕ್‌ಡೌನ್‌ನಿಂದ ರಕ್ತದ ಕೊರತೆ ಇರುವುದನ್ನು ಅರಿತು ಸಂಘದ ವತಿಂದ ತುರ್ತಾಗಿ ರಕ್ತದಾನ ಶಿಬಿರ ಆಯೋಜಿಸಿದ್ದು, ಸಂಘದ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್-19ರ ಪರಿಹಾರ ನಿಧಿಗೆ ರೂ.66666ನ್ನು ನೀಡಲಾಗುವುದು ಎಂದರು.

ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ, ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ, ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘ ಉಡುಪಿ ಘಟಕದ ಖಜಾಂಚಿ ಅಭಿಲಾಷ್, ದೇವರಾಜ್ ಪಾಣ ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಕೇಶವ ಪೂಜಾರಿ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News