ಉಡುಪಿ: ಶನಿವಾರ 109 ಮಂದಿಯ ಸ್ಯಾಂಪಲ್ ಪರೀಕ್ಷೆಗೆ
ಉಡುಪಿ, ಮೇ 16: ನೋವೆಲ್ ಕೊರೋನ ವೈರಸ್ (ಕೋವಿಡ್- 19) ಸೋಂಕಿನ ಪರೀಕ್ಷೆಗಾಗಿ ಕಳುಹಿಸಿದ ಶಂಕಿತರ ಗಂಟಲು ದ್ರವದ ಮಾದರಿಗಳಲ್ಲಿ ಶನಿವಾರ ಬಂದ 17 ವರದಿಗಳು ನೆಗೆಟಿವ್ ಫಲಿತಾಂಶವನ್ನು ನೀಡಿವೆ. ಹೀಗಾಗಿ ಇಂದು ಕಳುಹಿಸಿದ 109 ಸ್ಯಾಂಪಲ್‌ಗಳು ಸೇರಿದಂತೆ ಒಟ್ಟು 133 ಸ್ಯಾಂಪಲ್ ಗಳ ವರದಿ ಬರಲು ಬಾಕಿ ಇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಶುಕ್ರವಾರ ಒಂದು ವರ್ಷದ ಹೆಣ್ಣು ಮಗು ಸೇರಿದಂತೆ ಒಟ್ಟು ಆರು ಮಂದಿಯ ವರದಿ ಪಾಸಿಟಿವ್ ಆಗಿ ಬಂದಿದ್ದು, ಜಿಲ್ಲೆಯಲ್ಲಿ ದಾಖಲಾದ ಪಾಸಿಟಿವ್‌ಗಳ ಸಂಖ್ಯೆ 9ಕ್ಕೇರಿದೆ. ಮುಂಬಯಿಯಿಂದ ಮೇ 13ರಂದು ಕುಂದಾಪುರಕ್ಕೆ ಬಂದ ವ್ಯಕ್ತಿಯೊಬ್ಬರು ಶುಕ್ರವಾರ ಹೃದಯಾ ಘಾತದಿಂದ ಕೆಎಂಸಿ ಯಲ್ಲಿ ನಿಧನರಾಗಿದ್ದು, ಅವರ ಕೋವಿಡ್-19 ಪರೀಕ್ಷೆ ಇಂದು ಪಾಸಿಟಿವ್ ಆಗಿ ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ 10ಕ್ಕೇರಿದೆ ಎಂದವರು ತಿಳಿಸಿದರು.
ಇಂದು ಕೊರೋನ ರೋಗದ ಗುಣಲಕ್ಷಣವಿರುವ ಇನ್ನೂ 109 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇವುಗಳಲ್ಲಿ ಮೂವರು ಸಂಪರ್ಕಿತರು, ಆರು ಮಂದಿ ತೀವ್ರ ಉಸಿರಾಟ ತೊಂದರೆಯವರು, ಐವರು ಶೀತಜ್ವರದಿಂದ ಬಳಲುವವರು ಹಾಗೂ 95 ಮಂದಿ ಕೊರೋನ ಹಾಟ್‌ಸ್ಪಾಟ್‌ನಿಂದ ಬಂದವರ ಸ್ಯಾಂಪಲ್‌ಗಳು ಸೇರಿವೆ ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಶನಿವಾರ ಸಂಜೆಯವರೆಗೆ ಒಟ್ಟು 1971 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 1838ರ ವರದಿ ಬಂದಿದ್ದು, 1829 ನೆಗೆಟಿವ್ ಆಗಿವೆ. ಮಾ.29ರ ಬಳಿಕ ಮೊದಲ ಬಾರಿ ಬಂದ ಆರು ಪಾಸಿಟಿವ್ ಸೇರಿದಂತೆ ಈವರೆಗೆ ಒಂಭತ್ತು ವರದಿಗಳು ಪಾಸಿಟಿವ್ (ಮುಂಬಯಿ ವ್ಯಕ್ತಿಯ ವರದಿ ಸೇರಿಲ್ಲ) ಆಗಿ ಬಂದಿವೆ.
ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಇಂದು 20 ಮಂದಿ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ ತಲಾ 10 ಮಂದಿ ಪುರುಷ ಹಾಗೂ ಮಹಿಳೆಯರಿದ್ದಾರೆ. ಏಳು ಮಂದಿ ಕೊರೋನ ಶಂಕಿತರು, ಏಳು ಮಂದಿ ತೀವ್ರತರದ ಉಸಿರಾಟ ತೊಂದರೆ ಹಾಗೂ ಆರು ಮಂದಿ ಶೀತಜ್ವರದ ಬಾಧೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 11 ಮಂದಿ ಬಿಡುಗಡೆಗೊಂಡಿದ್ದು, 75 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ ಎಂದು ಡಾ. ಸೂಡ ತಿಳಿಸಿದರು.
ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ ಹಿನ್ನೆಲೆಯೊಂದಿಗೆ ಶನಿವಾರ ಮತ್ತೆ 75 ಮಂದಿ ಹೊಸದಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4572 ಮಂದಿಯನ್ನು ಕೊರೋನದ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 3121 (ಇಂದು 91) ಮಂದಿ 28 ದಿನಗಳ ನಿಗಾವನ್ನೂ, 3743 (50) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಲೂ 804 ಮಂದಿ ಹೋಮ್ ಕ್ವಾರಂಟೈನ್ ಹಾಗೂ 41 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್ ಚಂದ್ರ ಸೂಡ ವಿವರಿಸಿದರು.