ಮಂಗಳೂರು : 45 ದಿನಗಳಿಂದ ವಲಸೆ ಕಾರ್ಮಿಕರಿಗೆ ಆಹಾರ ನೀಡುತ್ತಿರುವ ಗೃಹಣಿ
ಮಂಗಳೂರು, ಮೇ.16: ಕೊರೋನ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದ ವಿವಿಧೆಡೆಗಳಲ್ಲಿ ಸಿಲುಕಿದ್ದ ಸಾವಿರಾರು ಹೊರರಾಜ್ಯಗಳ ಕಾರ್ಮಿಕರಿಗೆ ಗೃಹಿಣಿಯೊಬ್ಬರು ಸ್ವತಃ ತಾವೇ ಸ್ಥಳಕ್ಕೆ ತೆರಳಿ ಬೆಳಗ್ಗಿನ ಚಹಾ ಹಾಗೂ ಉಪಹಾರವನ್ನು ಕಳೆದ 45 ದಿನಗಳಿಂದ ನಿರಂತರವಾಗಿ ಒದಗಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಆತ್ತ ಊರಿಗೂ ಹೋಗಲಾಗದೆ ಇತ್ತ ಉದ್ಯೋಗವೂ ಇಲ್ಲದೆ ಪರದಾಡುತ್ತಿರುವ ವಲಸೆ ಕಾರ್ಮಿಕರ ಸಂಕಷ್ಟವನ್ನು ಅರಿತ ನಂದಿನಿ ರಘುಚಂದ್ರ ದಿನನಿತ್ಯ ಆಹಾರ ಒದಗಿಸುತ್ತಿದ್ದಾರೆ.
ಜಿಲ್ಲೆಯ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಈ ಕಾರ್ಮಿಕರ ಅವಿರತ ಶ್ರಮವಿದೆ. ಜಿಲ್ಲೆಯನ್ನು ನಂಬಿ ಬಂದ ಇವರನ್ನು ಗೌರವಯುತವಾಗಿ ಅವರ ಊರಿಗೆ ಕಳಿಸಬೇಕಾದ ಹೊಣೆ ನಮ್ಮೆಲ್ಲರದು. ಇದೀಗ ಕಷ್ಟದಲ್ಲಿರುವ ಈ ಕಾರ್ಮಿಕರಿಗೆ ಈ ರೀತಿ ಆಹಾರ ನೀಡುವುದರಿಂದ ಮನಸ್ಸಿಗೆ ನೆಮ್ಮದಿ ಯಾಗುತ್ತದೆ ಎಂದು ನಂದಿನಿ ರಘುಚಂದ್ರ ಹೇಳುತ್ತಾರೆ.
ಲಾಕ್‌ಡೌನ ಆರಂಭದ ದಿನಗಳಲ್ಲಿ ರೈಲ್ವೇ ನಿಲ್ದಾಣದಲ್ಲಿ ಉಪಹಾರ ನೀಡುತ್ತಿದ್ದೆವು. ಬಳಿಕ ಅವರನ್ನು ವಿವಿಧೆಡೆಗಳಿಗೆ ಸ್ಥಳಾಂತರಿಸಲಾಯಿತು. ಪುರಭವನದಲ್ಲಿದ್ದ ಕಾರ್ಮಿಕರಿಗೂ ಉಪಾಹಾರ ನೀಡುತ್ತಿದ್ದೆವು. ಅಮೇಲೆ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ಮನವಿ ಮೇರೆಗೆ ನಗರ ಲೇಡಿಹಿಲ್ ಸಮೀಪವಿರುವ ಕರಾವಳಿ ಮೈದಾನದಲ್ಲಿದ್ದ ಬಿಜಾಪುರ ಮೂಲದ ಸುಮಾರು 800 ಕಾರ್ಮಿಕರಿಗೆ ಹಾಗೂ ಉತ್ತರ ಪ್ರದೇಶ ಮೂಲದ ಸುಮಾರು 500 ಕಾರ್ಮಿಕರಿಗೆ ಅಹಾರ ಒದಗಿಸಲಾಯಿತು. ಈ ಸಂದರ್ಭದಲ್ಲಿ ಹಲವು ಬಾರಿ ಮಾಂಸಹಾರಿ ಆಹಾರವನ್ನು ನೀಡಿದ್ದೇವೆ. ಕೆಲವೊಮ್ಮೆ ಆತ್ಮೀಯ ಸ್ನೇಹಿತರ ಜನ್ಮದಿನದ ಪ್ರಯುಕ್ತ ಸಸ್ಯಹಾರಿ ಹಾಗೂ ಮಾಂಸಹಾರಿ ಊಟದ ಜೊತೆ ಪಾಯಸ, ಕೆಲವೊಮ್ಮೆ ಬಿರಿಯಾನಿ, ಮೊಟ್ಟೆ, ಇಡ್ಲಿ ಚಿಕನ್ ಹೀಗೆ ವಿವಿಧ ರೀತಿಯ ಆಹಾರ ಪದಾರ್ಥವನ್ನು ವಿತರಿಸಿದ್ದೇವೆ. ಇದೀಗ ಕಳೆದ ಮೂರು ದಿನಗಳಿಂದ ಪುರಭವದಲ್ಲಿರುವ ಜಾಖಂಡ್ ಮೂಲದ 1 ಸಾವಿರ ಕಾರ್ಮಿಕರಿಗೆ ಬೆಳಗಿನ ಚಾ ಹಾಗೂ ತಿಂಡಿಯನ್ನು ಪೂರೈಸುತ್ತಿದ್ದೇವೆ ಎಂದು ನಂದಿನಿ ಹೇಳುತ್ತಾರೆ.
ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿಯ ಸೂಚನೆಯಂತೆ 2-3 ದಿನ ಅಹಾರ ನೀಡುವ ಯೋಚನೆಯಿಂದ ಪ್ರಾರಂಭಿಸಿದೆ. ಬಳಿಕ ಸ್ನೇಹಿತರು ಧೈರ್ಯ ನೀಡಿದರು. ಸತತ 45 ದಿನಗಳಿಂದ ಸೇವೆ ಮುಂದುವರಿಸಿದ ತೃಪ್ತಿ ನನಗಿದೆ ಎಂದು ನಂದಿನಿ ರಘುಚಂದ್ರ ಅಭಿಪ್ರಾಯಪಟ್ಟಿದ್ದಾರೆ.