ಉ.ಕ. ಮೀನುಗಾರರಿಗೆ ಪ್ರತ್ಯೇಕ ಪ್ಯಾಕೇಜ್ ನೀಡುವಂತೆ ಶಾಸಕ ಸುನಿಲ್ ನಾಯ್ಕ ಆಗ್ರಹ
ಭಟ್ಕಳ : ಕೋವಿಡ್-19ರ ಲಾಕಡೌನ್‍ನಿಂದ ಸಂಕಷ್ಟದಲ್ಲಿರುವ ಉತ್ತರ ಕನ್ನಡದ ಮೀನುಗಾರರಿಗೆ ಪ್ರತ್ಯೇಕ ಪ್ಯಾಕೇಜ್ ನೀಡುವುದರ ಜತೆಗೆ ಮೀನುಗಾರರ ಮಹಿಳೆಯರು ಸ್ವಸಹಾಯ ಸಂಘದಿಂದ ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಶಾಸಕ ಸುನೀಲ ನಾಯ್ಕ್ ಮುಖ್ಯಮಂತ್ರಿ ಬಿ.ಎಸ್.ಯಡ್ಯೂಪ್ಪನವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಈ ಹಿಂದೆ ರಾಜ್ಯ ಸರಕಾರ 60 ಕೋಟಿ ರೂಪಾಯಿಯಷ್ಟು ಮೀನುಗಾರರ ಸಾಲ ಮನ್ನಾ ಮಾಡಿದ್ದು, ಈ ಸಾಲ ಮನ್ನಾದಲ್ಲಿ ಉತ್ತರ ಕನ್ನಡ ಮೀನುಗಾರರ 3 ಕೋಟಿ ಸಾಲ ಮಾತ್ರ ಮನ್ನಾ ಆಗಿದ್ದು, ಇದರ ಸಿಂಹಪಾಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರರಿಗೆ ದೊರಕಿದೆ. ಲಾಕಡೌನ್ ಆದಾಗಿನಿಂದ ಮೀನುಗಾರರು ಉದ್ಯೋಗವಿಲ್ಲದೇ ಕಂಗಾಲಾಗಿದ್ದು ತೀವ್ರ ಸಂಕಷ್ಟದಲ್ಲಿದ್ದಾರೆ. ಕೊರೋನಾ ಸಂದರ್ಭದಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯಕ್ಕೆ ಪ್ಯಾಕೇಜ ಘೋಷಣೆ ಆಗುತ್ತಿರುವುದರಿಂದ ಪ್ರಸ್ತುತ ಸಂಕಷ್ಟದಲ್ಲಿರುವ ಉತ್ತರ ಕನ್ನಡ ಜಿಲ್ಲಾ ಮೀನುಗಾರರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರೆ ಅವರು ಆರ್ಥಿಕವಾಗಿ ಚೇತರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಆಗ್ರಹಿಸಿರುವ ಅವರು ಮೀನುಗಾರ ಮಹಿಳೆಯರೂ ಸಹ ತಮ್ಮ ವೃತ್ತಿಯ ಅಭಿವೃದ್ಧಿಗಾಗಿ ಸ್ವಸಹಾಯ ಸಂಘಗಳ ಮೂಲಕ ಸಾಲ ಪಡೆದಿದ್ದು, ಇದೀಗ ಲಾಕಡೌನ್‍ನಿಂದ ಉದ್ಯೋಗವಿಲ್ಲದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರು ಸ್ವಸಹಾಯ ಸಂಘದ ಮೂಲಕ ಪಡೆದ ಕಿರುಸಾಲವನ್ನೂ ಕೂಡ ಮನ್ನಾ ಮಾಡಬೇಕು ಎಂದು ಅವರು ಮುಖ್ಯಮಂತ್ರಿ ಮತ್ತು ಮೀನುಗಾರಿಕಾ ಸಚಿವರನ್ನು ಆಗ್ರಹಿಸಿದ್ದಾರೆ.