ತಿಂಗಳಲ್ಲಿ ಇಬ್ಬರು ಆರೋಗ್ಯ ಸಚಿವರನ್ನು ಕಳೆದುಕೊಂಡ ಬ್ರೆಝಿಲ್ !

Update: 2020-05-16 18:12 GMT

ಬ್ರೆಸೀಲಿಯ (ಬ್ರೆಝಿಲ್), ಮೇ 16: ಬ್ರೆಝಿಲ್‌ನಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ದಾಳಿಯ ತೀವ್ರತೆ ಮುಂದುವರಿದಿರುವಂತೆಯೇ, ದೇಶದಲ್ಲಿ ಒಂದು ತಿಂಗಳ ಅವಧಿಯಲ್ಲಿ ಎರಡನೇ ಆರೋಗ್ಯ ಸಚಿವರು ರಾಜೀನಾಮೆ ನೀಡಿದ್ದಾರೆ.

 ಅಧ್ಯಕ್ಷ ಜೈರ್ ಬೊಲ್ಸೊನಾರೊ ಜೊತೆಗಿನ ಭಿನ್ನಾಭಿಪ್ರಾಯದ ಬಳಿಕ ಆರೋಗ್ಯ ಸಚಿವ ನೆಲ್ಸನ್ ಟೈಕ್ ರಾಜೀನಾಮೆ ನೀಡಿದ್ದಾರೆ. ಇದರ ವಿರುದ್ಧ ಬ್ರೆಝಿಲ್ ಜನರು ಕಿಟಿಕಿಗಳಿಂದ ಕೊಡಗಳನ್ನು ಬಾರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಪರಿಣತರು ಈ ಬೆಳವಣಿಗೆಯ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಮಲೇರಿಯ ಚಿಕಿತ್ಸೆಯಲ್ಲಿ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಕೊರೋನ ವೈರಸ್ ರೋಗಿಗಳಿಗೆ ಆರಂಭಿಕ ಹಂತದಲ್ಲಿ ಕೊಡುವುದರ ಸಂಬಂಧ ಆರೋಗ್ಯ ಸಚಿವರು ಮಾರ್ಗದರ್ಶಿ ಸೂಚನೆಗಳನ್ನು ಹೊರಡಿಸಬೇಕು ಎಂಬುದಾಗಿ ಅಧ್ಯಕ್ಷ ಬೊಲ್ಸೊನಾರೊ ಗುರುವಾರ ಒತ್ತಾಯಿಸಿದ್ದರು.

ಆದರೆ, ಕೊರೋನ ವೈರಸ್ ಚಿಕಿತ್ಸೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯು ಕೆಲಸ ಮಾಡುತ್ತದೆ ಎನ್ನುವುದು ಸಾಬೀತಾಗಿಲ್ಲ. ಅದೂ ಅಲ್ಲದೆ, ಅದರ ಪರಿಣಾಮಕಾರಿತ್ವದ ಬಗ್ಗೆ ಕೆಲವು ಅಧ್ಯಯನಗಳು ಸಂಶಯ ವ್ಯಕ್ತಪಡಿಸಿವೆ ಹಾಗೂ ಅದರ ಬಳಕೆಯು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದಾಗಿ ಎಚ್ಚರಿಸಿವೆ.

ಈ ವಿಷಯದಲ್ಲಿ ಅಧ್ಯಕ್ಷರೊಂದಿಗೆ ಭಿನ್ನಾಭಿಪ್ರಾಯ ಉಂಟಾದ ಬಳಿಕ ಆರೋಗ್ಯ ಸಚಿವ ನೆಲ್ಸನ್ ಟೈಕ್ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ತನ್ನ ರಾಜೀನಾಮೆಗೆ ಕಾರಣವನ್ನು ನೀಡಿಲ್ಲ. ಇದಕ್ಕೂ ಮೊದಲು, ಕೊರೋನ ವೈರಸ್ ಚಿಕಿತ್ಸೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಬಳಸುವಂತೆ ಅಧ್ಯಕ್ಷ ಬೊಲ್ಸೊನಾರೊ ನೀಡಿದ ಸೂಚನೆಯನ್ನು ಪಾಲಿಸಲು ನಿರಾಕರಿಸಿದ ಅಂದಿನ ಆರೋಗ್ಯ ಸಚಿವ ಲೂಯಿಸ್ ಹೆನ್ರಿಕ್ ಮಾಂಡೆಟರನ್ನು ಎಪ್ರಿಲ್ 16ರಂದು ಅಧ್ಯಕ್ಷರು ವಜಾಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News