​ಬೈಂದೂರು ತಾಲೂಕಿನ ಯುವತಿಗೆ ಕೊರೋನ ಪಾಸಿಟಿವ್ : ಜಿಲ್ಲಾಧಿಕಾರಿ

Update: 2020-05-18 14:44 GMT

ಉಡುಪಿ, ಮೇ 18: ಕಳೆದ ಮೇ 12ರಂದು ಮುಂಬೈಯಿಂದ ಪತಿಯೊಂದಿಗೆ ಊರಿಗೆ ಆಗಮಿಸಿದ ಬೈಂದೂರು ತಾಲೂಕಿನ 28ರ ಹರೆಯ ಗರ್ಭಿಣಿ ಇಂದು ಕೊರೋನ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಬಂದವರ ಸಂಖ್ಯೆ 11ಕ್ಕೇರಿದೆ. ಮಾ.29ರವರೆಗೆ ಸೋಂಕು ಪತ್ತೆಯಾದ ಮೂವರು ಯುವಕರು ಈಗಾಗಲೇ ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ಮೇ 13ರಂದು ಮುಂಬೈಯಿಂದ ಬಂದು ಹೃದಯಾಘಾತದಿಂದ ಮೇ 14ರಂದು ಮಣಿಪಾಲ ಕೆಎಂಸಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಸ್ಯಾಂಪಲ್ ಪರೀಕ್ಷೆಯಲ್ಲಿ ಅವರಲ್ಲೂ ಸೋಂಕು ಪತ್ತೆಯಾಗಿತ್ತು. ಇದೀಗ ಉಳಿದ ಏಳು ಮಂದಿ ಉಡುಪಿಯಲ್ಲಿರುವ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

 ಬೈಂದೂರು ತಾಲೂಕು ಉಪ್ಪುಂದದ ಈ ಮಹಿಳೆ ಪತಿಯೊಂದಿಗೆ ಮೇ 12ರಂದು ಮುಂಬೈಯಿಂದ ಊರಿಗೆ ಆಗಮಿಸಿದ್ದು, ಕೊಲ್ಲೂರಿನ ಬಾಲಕರ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಏಳು ತಿಂಗಳ ಗರ್ಭಿಣಿಯಾದ ಈಕೆ ಹೈ ರಿಸ್ಕ್ ಅಡಿಯಲ್ಲಿ ಬರುವ ಕಾರಣ ಆದ್ಯತೆ ಮೇಲೆ ಗಂಟಲು ದ್ರವದ ಮಾದರಿ ಯನ್ನು ಪಡೆದು ಪರೀಕ್ಷೆಗೆ ಕಳುಹಿಸಿದ್ದು, ಇಂದು ಅದು ಪಾಸಿಟಿವ್ ಫಲಿತಾಂಶ ನೀಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದೀಗ ಆಕೆಯನ್ನು ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿಶೇಷ ನಿಗಾದಡಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಪತಿಯನ್ನು ಕುಂದಾಪುರದಲ್ಲಿ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಳಿಸಿ ಸ್ಯಾಂಪಲ್‌ನ್ನು ಪರೀಕ್ಷೆಗಾಗಿ ಪಡೆಯಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಮುಂಬೈಯಿಂದ ಬರುವ ವಾಹನ ಹಾಗೂ ಕೊಲ್ಲೂರಿನ ಕ್ವಾರಂಟೈನ್ ಕೇಂದ್ರದಲ್ಲಿ ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದ 25 ಮಂದಿಯನ್ನು ಗುರುತಿಸಿ ಅವರನ್ನೂ ಕ್ವಾರಂಟೈನ್‌ನಲ್ಲಿರಿಸಿ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಲಾಗುತ್ತಿದೆ ಎಂದವರು ಹೇಳಿದರು.

ವರದಿ ಬಂದಿಲ್ಲ: ಮಹಾರಾಷ್ಟ್ರದಿಂದ 5ದಿನಗಳ ಹಿಂದೆ ಬಂದು ಕೊಲ್ಲೂರಿನಲ್ಲಿ ಕ್ವಾರಂಟೈನ್‌ನಲ್ಲಿರುವ 55ರ ಹರೆಯದ ವ್ಯಕ್ತಿಯಲ್ಲಿ ಕೊರೋನದ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ಅದರ ವರದಿ ಇನ್ನೂ ಬಂದಿಲ್ಲ ಎಂದು ಡಿಎಚ್‌ಓ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News