ಅನಾರೋಗ್ಯ ಪತಿಯನ್ನು ನೋಡಲು ಕಣ್ಣೀರಿಟ್ಟ ಕ್ವಾರಂಟೈನ್‌ನಲ್ಲಿದ್ದ ಮಹಿಳೆ

Update: 2020-05-18 14:44 GMT

ಬ್ರಹ್ಮಾವರ, ಮೇ 18: ಮುಂಬೈಯಿಂದ ಮಗನ ಜೊತೆ ಆಗಮಿಸಿ ಬ್ರಹ್ಮಾವರದಲ್ಲಿ ಸರಕಾರಿ ಕ್ವಾರಂಟೇನ್‌ಗೆ ಒಳಗಾಗಿದ್ದ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಮಹಿಳೆಯೊಬ್ಬರು, ಅನಾರೋಗ್ಯದಿಂದ ಗಂಭೀರ ಸ್ಥಿತಿ ಯಲ್ಲಿರುವ ತನ್ನ ಗಂಡನನ್ನು ನೋಡಲು ಅವಕಾಶ ಮಾಡಿ ಕೊಡುವಂತೆ ಶಾಸಕರು ಹಾಗೂ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ಘಟನೆ ಇಂದು ನಡೆದಿದೆ.

ಬ್ರಹ್ಮಾವರದಲ್ಲಿರುವ ಸರಕಾರಿ ಕ್ವಾರಂಟೈನ್‌ನಲ್ಲಿರುವವರ ಯೋಗ ಕ್ಷೇಮ ವಿಚಾರಿಸಲು ಕೇಂದ್ರಕ್ಕೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಹಾಗೂ ಅಧಿಕಾರಿ ಗಳು ತೆರಳಿದ್ದರು. ಅಲ್ಲಿ ಮುಂಬೈನಿಂದ ಉಡುಪಿಯ ಪಾಸ್ ಪಡೆದು ಆಗಮಿಸಿ ಕ್ವಾರಂಟೇನ್‌ನಲ್ಲಿದ್ದ ಸುರತ್ಕಲ್‌ನ ಮಹಿಳೆ, ಅನಾರೋಗ್ಯದಿಂದ ಗಂಭೀರ ಸ್ಥಿತಿಯಲ್ಲಿರುವ ನನ್ನ ಗಂಡನನ್ನು ನೋಡಲು ಅವಕಾಶ ಮಾಡಿಕೊಡು ವಂತೆ ಬೇಡಿಕೊಂಡರು. ‘ನನ್ನನ್ನು ಸುರತ್ಕಲ್ ಗೆ ಕಳುಹಿಸಿ ಕೊಡಿ, ಅಲ್ಲಿ ನಾನು ಕ್ವಾರಂಟೈನ್ನಲ್ಲಿರುತ್ತೇನೆ’ ಎಂದು ಕೇಳಿಕೊಂಡರು.

ಇದಕ್ಕೆ ಸ್ಪಂದಿಸಿದ ಶಾಸಕರು, ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಮತ್ತು ಮಹಿಳೆಯ ಮನೆ ಇರುವ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರಲ್ಲಿ ಚರ್ಚಿಸಿದರು. ಅದರಂತೆ ಮಹಿಳೆಯನ್ನು ಸರಕಾರಿ ನಿಯಮಾವಳಿಯಂತೆ ಕಳುಹಿಸಲು ಸೂಚಿಸಿದರು. ತೀರ ಬಡವರಾಗಿರುವ ಈ ಮಹಿಳೆಗೆ ಸ್ವಂತ ಖರ್ಚಿನಲ್ಲಿ ತೆರಳಲು ಸಾಧ್ಯವಾಗದಿದ್ದಾಗ ಶಾಸಕ ರಘುಪತಿ ಭಟ್, ತನ್ನ ಸ್ವಂತ ಖರ್ಚಿನಿಂದ ವಾಹನದ ವ್ಯವಸ್ಥೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಬ್ರಹ್ಮಾವರ ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭಟ್, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಪಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News