ಸ್ವರ್ಣ ನದಿಯಿಂದ ಅಕ್ರಮ ಮರಳು ಸಾಗಾಟ: ಗಣಿ ಇಲಾಖೆಯಿಂದ ಮೂವರ ವಿರುದ್ಧ ದೂರು ದಾಖಲು
ಉಡುಪಿ, ಮೇ 18: ಉಡುಪಿಯ ಸ್ವರ್ಣ ನದಿಯಲ್ಲಿ ಹೂಳೆತ್ತುವ ಹೆಸರಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಟೆಂಡರುದಾರ ಸಹಿತ ಮೂವರ ವಿರುದ್ಧ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಉಡುಪಿ ಪಿಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ದಲ್ಲಿ ಇಂದು ಖಾಸಗಿ ದೂರು ದಾಖಲಿಸಿದೆ.
ಸ್ವರ್ಣ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಕುರಿತು ಮೇ 16ರಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಪ್ರಕರಣ ದಾಖಲಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಎರಡು ಟಿಪ್ಪರ್, ಎರಡು ಹಿಟಾಚಿ ಮತ್ತು ಒಂದು ಜೆಸಿಬಿ ಸಹಿತ ಮರಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಸಂಬಂಧ ಹೂಳು ತೆಗೆಯಲು ಉಡುಪಿ ನಗರಸಭೆಯಿಂದ ಗುತ್ತಿಗೆ ಪಡೆದಿದ್ದ ಮಂಗಳೂರು ಯೋಜಕ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಇದರ ಟೆಂಡರುದಾರ ವಿನಯ ಕುಮಾರ್ ಮತ್ತು ವಶಪಡಿಸಿಕೊಂಡ ವಾಹನಗಳ ಇಬ್ಬರು ಮಾಲಕರ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಮಹೇಶ್, ಉಡುಪಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಕ್ರಮಕ್ಕೆ ಸಿದ್ದರಾಮಯ್ಯ ಟ್ವಿಟ್
ಸ್ವರ್ಣ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಮತ್ತು ಮರಳು ಕಳ್ಳ ಸಾಗಾಣಿಕೆಯಲ್ಲಿ ಆಡಳಿತ ಪಕ್ಷದ ನಾಯಕರೇ ಭಾಗಿಯಾಗಿ ರುವ ಆರೋಪ ಇದ್ದು, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಟ್ವೀಟ್ ಮಾಡಿದ್ದಾರೆ.
ಈ ಮರಳು ಕಳ್ಳ ಸಾಗಾಣಿಕೆಯ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ ವ್ಯಕ್ತಿಗೆ ಬೆದರಿಕೆ ಕರೆ ಬರುತ್ತಿದ್ದು, ಅವರಿಗೆ ತಕ್ಷಣ ಪೊಲೀಸ್ ಭದ್ರತೆ ಯನ್ನು ಒದಗಿಸಬೇಕು. ಜೀವಭಯ ಒಡ್ಡುತ್ತಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳ ಪಡಿಸಬೇಕು ಎಂದು ಅವರು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.