ಜಲ್‌ಜೀವನ್ ಮಿಷನ್: ಉಡುಪಿ ಜಿಲ್ಲೆಯಿಂದ 415 ಕೋಟಿ ರೂ. ಪ್ರಸ್ತಾವನೆ
ಉಡುಪಿ, ಮೇ 18: ಕೇಂದ್ರ ಸರ್ಕಾರದ ಜಲ್‌ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿಮನೆಗೆ ಶುದ್ದ ಕುಡಿಯುವ ನೀರು ಒದಗಿಸಲು ರೂ.415 ಕೋಟಿ ರೂ.ಗಳ ಕ್ರಿಯಾ ಯೋಜನೆಯ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಸೋಮವಾರ ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಜಲ್‌ಜೀವನ್ ಮಿಷನ್, 2024ರೊಳಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೆ ವರ್ಷದ 365 ದಿನವೂ, ದಿನಕ್ಕೆ 55 ಲೀ. ಶುದ್ದ ಕುಡಿಯುವ ನೀರು ಒದಗಿಸುವ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಈ ಯೋಜನೆಗಾಗಿ 415 ಕೋಟಿರೂ.ಗಳ ಅಂದಾಜು ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಈ ಪ್ರಸ್ತಾವನೆ ರಾಜ್ಯದಿಂದ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಲಿದ್ದು, ಅಲ್ಲಿಂದ ಅನುಮೋದನೆ ದೊರೆಯಲಿದೆ ಎಂದು ತಿಳಿಸಿದ ಅಧ್ಯಕ್ಷ ದಿನಕರ ಬಾಬು, ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಗ್ರಾಮೀಣ ಪ್ರದೇಶದ ಯಾವುದೇ ಮನೆಗಳು ಈ ಯೋಜನೆಯಿಂದ ವಂಚಿತರಾಗದಂತೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು.
ಕ್ರಿಯಾ ಯೋಜನೆಯಲ್ಲಿ ಉಡುಪಿ ತಾಲೂಕಿನ 101 ಗ್ರಾಮಗಳ 1,00,800 ಮನೆಗಳಿಗೆ 108.86 ಕೋಟಿ ರೂ, ಕುಂದಾಪುರ ತಾಲೂಕಿನ 50 ಗ್ರಾಮಗಳ 58,161 ಮನೆಗಳಿಗೆ 109.44 ಕೋಟಿ ರೂ ಹಾಗೂ ಕಾರ್ಕಳ ತಾಲೂಕಿನ 99 ಗ್ರಾಮಗಳ 88,000 ಮನೆಗಳಿಗೆ 196.76 ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸಲಾಗಿದೆ. ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ, ಶಾಲೆ, ಅಸ್ಪತ್ರೆಗಳಿಗೂ ಸಹ ನೀರಿನ ಸೌಲಭ್ಯ ಒದಗಿಸಲಾಗುವುದು ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ತಿಳಿಸಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ ರಾಜ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.