×
Ad

ಪಿಪಿಪಿ ಅಡಿ ಮಂಗಳೂರು ಬಸ್ ನಿಲ್ದಾಣ ನಿರ್ಧಾರ ಹಿಂಪಡೆಯಲು ಡಿವೈಎಫ್‌ಐ ಮನವಿ

Update: 2020-05-19 21:53 IST

ಮಂಗಳೂರು, ಮೇ 19: ಸ್ಮಾರ್ಟ್ ಸಿಟಿ, ಎಡಿಬಿ ಸಾಲ, ರಾಜ್ಯ ಸರಕಾರದ ಅನುದಾನ ಸಹಿತ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಹಲವು ಅವಕಾಶಗಳಿದ್ದರೂ ಖಾಸಗಿ, ಸರಕಾರಿ ಪಾಲುದಾರಿಕೆ (ಪಿಪಿಪಿ)ಯಲ್ಲಿ ಮಂಗಳೂರು ಸಾರ್ವಜನಿಕ ಸಾರಿಗೆ ಕೇಂದ್ರ (ಬಸ್ ತಂಗುದಾಣ) ನಿರ್ಮಿಸಲು ರಾಜ್ಯ ಸಚಿವ ಸಂಪುಟ ಅವಕಾಶ ನೀಡಿರುವುದನ್ನು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ತೀವ್ರವಾಗಿ ವಿರೋಧಿಸಿದೆ. ಅಲ್ಲದೆ ಈ ಜನವಿರೋಧಿ ತೀರ್ಮಾನವನ್ನು ತಕ್ಷಣ ಕೈ ಬಿಟ್ಟು ನಗರ ಪಾಲಿಕೆಯಡಿಯಲ್ಲಿಯೇ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಡಿವೈಎಫ್‌ಐ ನಿಯೋಗ ದ.ಕ.ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

445 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಆಧುನಿಕ ಬಸ್ ತಂಗುದಾಣವು ಶಾಪಿಂಗ್ ಮಾಲ್, ಕಚೇರಿ ಸಂಕೀರ್ಣ, ಬಹು ಮಹಡಿ ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ. ಆದರೆ ನಿರ್ಮಾಣದ ನಂತರ 40 ವರ್ಷಗಳ ಕಾಲ ದೀರ್ಘ ಅವಧಿಗೆ ಇಡೀ ಸಾರಿಗೆ ಕೇಂದ್ರವು ಹೂಡಿಕೆ ಮಾಡಿದ ಖಾಸಗಿ ಕಂಪೆನಿಯ ಒಡೆತನಕ್ಕೆ ಸಿಲುಕುತ್ತದೆ. ನಲವತ್ತು ವರ್ಷಗಳ ನಂತರ ಕಟ್ಟಡದ ಬಾಳಿಕೆ ಅವಧಿ, ನವೀಕರಣ ವಿಸ್ತರಣೆ ಮುಂತಾದ ಕಾರಣಕ್ಕೆ ಮತ್ತೆ ಖಾಸಗಿಯವರ ಲೀಸ್ ನವೀಕರಣಗೊಳ್ಳುತ್ತದೆಯೇ ಹೊರತು ನಗರ ಪಾಲಿಕೆಯ ಒಡೆತನಕ್ಕೆ ಯಾವತ್ತೂ ಮರಳುವುದಿಲ್ಲ. ಇದು ಪೂರ್ಣವಾಗಿ ಸರಕಾರಿ ಭೂಮಿಯಾಗಿದ್ದು, ಖಾಸಗಿಯವರ ತಿಜೋರಿ ತುಂಬಿಸುವ ಯೋಜನೆಯಂತೆ ಭಾಸವಾಗುತ್ತದೆ. ಹಾಗಾಗಿ ಸರಕಾರ ಈ ಜನವಿರೋಧಿ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ನಿಯೋಗ ಒತ್ತಾಯಿಸಿದೆ.

ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿಯ ಕಾರ್ಯದರ್ಶಿ ಸಂತೋಷ್ ಬಜಾಲ್, ನಿತಿನ್ ಕುತ್ತಾರ್, ರಝಾಕ್ ಮೊಂಟೆಪದವು, ಅಶ್ರಫ್ ತಲಪಾಡಿ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News